×
Ad

ವಿಶ್ವದರ್ಜೆಯ ಮೂಲಭೂತ ಸೌಕರ್ಯ: ಅಧಿಕಾರಿಗಳಿಗೆ ಸಚಿವ ಮುರುಗೇಶ್ ನಿರಾಣಿ ಸೂಚನೆ

Update: 2021-09-01 19:25 IST

ಬೆಂಗಳೂರು, ಸೆ.1: ರಾಜ್ಯದಲ್ಲಿನ ಪ್ರತಿಯೊಂದು ಕೈಗಾರಿಕಾ ಪ್ರದೇಶದಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬುಧವಾರ ರಾಮನಗರದ ಹಾರೋಹಳ್ಳಿ, ಬಿಡದಿ, ಜಿಗಣಿ ಸೇರಿದಂತೆ ಮತ್ತಿತರ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಖುದ್ದು ಪರಿಶೀಲನೆ ನಡೆಸಿದ ಅವರು, ಬೆಳಗ್ಗೆಯಿಂದ ದಿನಪೂರ್ತಿ ಬೆಂಗಳೂರಿನ ಸುತ್ತಮುತ್ತಲಿರುವ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ನೈಜ ಸ್ಥಿತಿಯನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಿದರು.

ಕೈಗಾರಿಕಾ ಪ್ರದೇಶಗಳಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಮುಖ್ಯವಾಗಿ ರಸ್ತೆ, ವಿದ್ಯುತ್, ನೀರಿನ ಸಂಪರ್ಕ, ಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ ಅವರು, ಒಂದು ಹಂತದಲ್ಲಿ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡು ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾದರೆ ನಾನು ಸುಮ್ಮನಿರುವುದಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಮೊದಲ ಸ್ಥಾನವೇ ನಮ್ಮ ಗುರಿ: ಕರ್ನಾಟಕವನ್ನು ದೇಶದಲ್ಲೇ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದೇ ನಮ್ಮ ಗುರಿಯಾಗಿದೆ. ಇಲ್ಲಿರುವ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡು ಕೈಗಾರಿಕಾ ಕ್ರಾಂತಿ ಸೃಷ್ಟಿಸಬೇಕು ಎಂದು ಮುರುಗೇಶ್ ನಿರಾಣಿ ನಿರ್ದೇಶನ ನೀಡಿದರು.

ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರಬೇಕು. ಮೂಲಭೂತ ಸೌಕರ್ಯಗಳಿಲ್ಲದಿದ್ದರೆ ಯಾರೊಬ್ಬರೂ ಬರುವುದಿಲ್ಲ. ಅಗತ್ಯವಿರುವ ಕಡೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ವಿಶ್ವವೇ ಕರ್ನಾಟಕದತ್ತ ತಿರುಗಿ ನೋಡಬೇಕು. ಆ ನಿಟ್ಟಿನಲ್ಲಿ ನಮ್ಮ ಕೈಗಾರಿಕೆಗಳು ಬೆಳೆಯಬೇಕು. ನಷ್ಟದಲ್ಲಿರುವ ಕೈಗಾರಿಕೆಗಳ ಪುನಶ್ಚೇತನಕ್ಕೆ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

ನಾನು ಕೈಗಾರಿಕಾ ಸಚಿವನಾಗಿ ಅಧಿಕಾರದಲ್ಲಿರುವವರೆಗೂ ಒಂದೇ ಒಂದು ಕೈಗಾರಿಕೆಯನ್ನೂ ಮುಚ್ಚಲು ಅವಕಾಶ ಕೊಡುವುದಿಲ್ಲ. ರೋಗಗ್ರಸ್ಥ ಕೈಗಾರಿಕೆಗಳಿಗೆ ಕಾಯಕಲ್ಪ ನೀಡಿ ಲಾಭದತ್ತ ಕೊಂಡೊಯ್ಯುವುದು ನನ್ನ ಗುರಿ ಎಂದು ಮುರುಗೇಶ್ ನಿರಾಣಿ ಹೇಳಿದರು.
ಬಲವಂತ ಬೇಡ: ಕೈಗಾರಿಕಾ ಪ್ರದೇಶಗಳಿಗೆ ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಬಲವಂತವಾಗಿ ಒಂದೇ ಒಂದು ಇಂಚೂ ಸ್ವಾಧೀನಪಡಿಸಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಉಪಯೋಗಕ್ಕೆ ಬಾರದ ಹಾಗೂ ರೈತರೇ ಸ್ವಯಂಪ್ರೇರಿತರಾಗಿ ಸರಕಾರಕ್ಕೆ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಲು ಮುಂದೆ ಬಂದರೆ ಮಾತ್ರ ವಶಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಕೆಐಎಡಿಬಿ ಅಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆ ನಡೆಸುವ ವೇಳೆ ಅತ್ಯಂತ ಜಾಗ್ರತೆಯಿಂದ ಎಚ್ಚರಿಕೆ ಹೆಜ್ಜೆ ಇಡಬೇಕು. ರೈತರು ಉಪಯೋಗಿಸಿಕೊಳ್ಳುತ್ತಿದ್ದರೆ ಅಂತಹ ಜಮೀನನ್ನು ಸ್ವಾಧೀನ ಮಾಡಿಕೊಳ್ಳಬಾರದು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ ನಾನು ಸುಮ್ಮನಿರುವುದಿಲ್ಲ. ಅಂತಹವರ ಮೇಲೆ ಶಿಸ್ತುಕ್ರಮ ಜರುಗಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅವರು ಎಚ್ಚರಿಕೆ ಸಂದೇಶ ರವಾನಿಸಿದರು.

ಈ ಸಂದರ್ಭದಲ್ಲಿ ಕೆಐಎಡಿಬಿ ಸಿಇಒ ಎನ್.ಶಿವಶಂಕರ್, ಮುಖ್ಯ ಅಭಿವೃದ್ಧಿ ಅಧಿಕಾರಿ ಬಿ.ಕೆ.ಪವಿತ್ರ, ಕೆಆರ್‍ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News