×
Ad

‘ನೋ ವಾಕ್ಸಿನೇಷನ್, ನೋ ರೇಷನ್, ನೋ ಪೆನ್ಷನ್': ಆದೇಶ ಹಿಂಪಡೆದ ಚಾಮರಾಜನಗರ ಜಿಲ್ಲಾಧಿಕಾರಿ

Update: 2021-09-01 19:39 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

ಚಾಮರಾಜನಗರ, ಸೆ.1: ‘ನೋ ವಾಕ್ಸಿನೇಷನ್, ನೋ ರೇಷನ್, ನೋ ಪೆನ್ಷನ್’ ಜಾರಿ ಸಂಬಂಧ ಸಾಮಾಜಿಕ ಜಾಲತಾಣ ಹಾಗೂ ರಾಜಕೀಯ ಮುಖಂಡರಿಂದ ಆಕ್ಷೇಪ, ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಮ್ಮ ತೀರ್ಮಾನದಿಂದ ಹಿಂದೆ ಸರಿದಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ಈ ರೀತಿಯ ಯಾವುದೇ ಅಧಿಕೃತ ಆದೇಶವನ್ನು ಇದುವರೆಗೂ ನೀಡಿಲ್ಲವಾದ್ದರಿಂದ ಪಿಂಚಣಿದಾರರಿಗೆ ಮತ್ತು ಪಡಿತರದಾರರಿಗೆ ಸೇವೆ ನಿರಾಕರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರವಷ್ಟೇ ಡಿಸಿ ಮಾತನಾಡಿ, ಸೆ.1ರಿಂದ ಲಸಿಕೆ ಪಡೆಯದವರಿಗೆ ಪಡಿತರ, ಪಿಂಚಣಿ ತಡೆ ಹಿಡಿಯುವ ಕಾರ್ಯಕ್ರಮ ರೂಪಿಸಲಾಗಿದೆ. ಈಗಲೂ ಲಸಿಕೆ ಪಡೆಯಲು ಅಸಡ್ಡೆ ತೋರುವವರಿಗೆ, ಉದಾಸೀನ ಪ್ರವೃತ್ತಿಯವರು ಇರುವುದರಿಂದ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಜಿಲ್ಲಾಧಿಕಾರಿಯ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದರು. ಅದೂ ಅಲ್ಲದೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಜಿಲ್ಲಾಧಿಕಾರಿಯ ನಿಲುವನ್ನು ವಿರೋಧಿಸಿದ್ದರು. ಇದರ ಬೆನ್ನ ಹಿಂದೆಯೇ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾಧ್ಯಮಗಳಿಗೆ ತಾವು ನೀಡಿದ್ದ ಹೇಳಿಕೆಯನ್ನು ಹಿಂಪಡೆದು ಪಡಿತರ ಮತ್ತು ಪೆನ್ಷನ್ ತಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News