'ಬರೀ ಹಣ ವಸೂಲಿಗಾಗಿ ರಾಜ್ಯಕ್ಕೆ ಬರುತ್ತಿದ್ದಾರೆ':ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

Update: 2021-09-01 14:25 GMT

ಮೈಸೂರು,ಸೆ.1: ರಾಜ್ಯ ಉಸ್ತುವಾರಿ ಹೊತ್ತ ಮೇಲೆ ರಾಜ್ಯ ಸ್ಥಿತಿಗತಿ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು ಅಭಿವೃದ್ಧಿಗೆ ಒತ್ತು ಕೊಡಬೇಕೆ ಹೊರತು ಬರೀ ವಸೂಲಿಗಾಗಿ ರಾಜ್ಯಕ್ಕೆ ಬರುವುದಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಮುಳುಗುತ್ತಿರುವ ಹಡಗಾಗಿದೆ ಎಂದಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್   ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಉಸ್ತುವಾರಿ ಹೊತ್ತ ಮೇಲೆ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಬೇಕು, ಆದರೆ ಅರುಣ್ ಸಿಂಗ್ ಬರೀ ಹಣ ವಸೂಲಿಗಾಗಿ ರಾಜ್ಯಕ್ಕೆ ಬರುತ್ತಿದ್ದಾರೆ. ಇನ್ನೂ ಕರ್ನಾಟಕದಿಂದ ಸಂಸತ್ ಗೆ ಆಯ್ಕೆಯಾದ ಬಿಜೆಪಿ ಸಂಸದರಿಗೆ, ರಾಜ್ಯದ ಮಂತ್ರಿಗಳಿಗೆ  ಕೇಂದ್ರ ಸರ್ಕಾರದ ಬಳಿ ಮಾತನಾಡಲು ಎಲುಬು ಇಲ್ಲ, ಮೂಳೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

''ಮೈಸೂರು ಮೇಯರ್ ಆಯ್ಕೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿ ಶಾಸಕ ಸಾ ರಾ ಮಹೇಶ್ ಕಚೇರಿಗೆ ಬಿಜೆಪಿ ನಾಯಕರು ಏಕೆ ಬಂದಿದ್ದರು? ನಾವೇನು ಬೆಂಬಲ ಕೋರಿ ಅವರ ಬಳಿಗೆ ಹೋಗಿಲ್ಲ. ಅರುಣ್ ಸಿಂಗ್ ರಾಜ್ಯದ ವಾಸ್ತವ ಪರಿಸ್ಥಿತಿ ಗೊತ್ತಿಲ್ಲ. ಇಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ವಸೂಲಿಗಾಗಿ ಅರುಣ್ ಸಿಂಗ್ ಆಗಾಗ್ಗೆ ಭೇಟಿ ನೀಡುತ್ತಾರೆ. ಜೆಡಿಎಸ್ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು'ಎಂದರು.

ಕರ್ನಾಟಕದಿಂದ ಸಂಸತ್ ಗೆ ಆಯ್ಕೆಯಾದ ಬಿಜೆಪಿ ಸಂಸದರಿಗೆ, ರಾಜ್ಯದ ಮಂತ್ರಿಗಳಿಗೆ  ಕೇಂದ್ರ ಸರ್ಕಾರದ ಬಳಿ ಮಾತನಾಡಲು ಎಲುಬು ಇಲ್ಲ,  ಮೂಳೆನೂ ಇಲ್ಲ, ಅದಕ್ಕೋಸ್ಕರ ಅವರನ್ನು ಉಸ್ತುವಾರಿ ಅಂತ ಹಾಕಿಕೊಂಡಿದ್ದಾರೆ. ಅವರು ಇಲ್ಲಿ ಪಕ್ಷ ಕಟ್ಟಬೇಕು ಅಂತಿದ್ದರೆ ಕನ್ನಡಿಗರ ಸಮಸ್ಯೆ ಏನಿದೆ, ಕನ್ನಡ ನಾಡಿನ ಸಮಸ್ಯೆಗಳ  ವಿಷಯಗಳನ್ನು ಕ್ರೋಢೀಕರಿಸಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕಾಗಿರುವುದು ಆ ಉಸ್ತುವಾರಿ ಕೆಲಸ. ಬಂದು ಬರೀ ಸೂಟಕೇಸ್ ತಗೊಂಡು ಹೋಗೋದಲ್ಲ. ಈ ಕಡೆಯೂ ಗಮನ ನೀಡಲಿ ಎಂದು ಸಲಹೆ ನೀಡಿದರು.

ಜೆಡಿಎಸ್ ಫ್ಯೂಸ್ ತೆಗೆಯಲಾಗಿದೆ ಎಂದಿದ್ದಕ್ಕೆ ಪ್ರತಿಕ್ರಿಯಿಸಿ  ಜೆಡಿಎಸ್ ಫ್ಯೂಸ್ ತೆಗೆಯಲಿ ಏನೇ ಮಾಡಲಿ, ಜೆಡಿಎಸ್ ತಳಪಾಯವನ್ನು ಭದ್ರವಾಗಿ ಮಾಡಿದೆ. ಈ ಕಾರ್ಯಕರ್ತರೆನ್ನುವ ತಳಪಾಯ ಭದ್ರವಾಗಿದೆ.  ಅದಕ್ಕಾಗಿ ಯಾರೂ ಜೆಡಿಎಸ್ ಫ್ಯೂಸ್ ತೆಗೆಯಲೂ ಆಗಲ್ಲ, ಶಾಕ್ ಕೊಡಲೂ ಆಗಲ್ಲ ಇದು ನನ್ನ ಅಭಿಪ್ರಾಯ ಎಂದರು.

ಜಿ.ಟಿ.ದೇವೇಗೌಡ ಅವರು ಪಕ್ಷ ಬಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿ ಎರಡು ವರ್ಷದ ಹಿಂದೆಯೇ ಬಿಟ್ಟಿದ್ದೇನೆ ಎಂದಿದ್ದಾರಲ್ಲ ಅವರು. ನಿನ್ನೆಯ ಹೇಳಿಕೆಯನ್ನು ಇಂದು ಬೆಳಿಗ್ಗೆ ಪತ್ರಿಕೆಯಲ್ಲಿ ನೋಡಿದೆ. ಜೆಡಿಎಸ್ ನಿಂದ ಹಿಂದೆ ಸರಿದಿದ್ದೇನೆ ಅನ್ನೋದನ್ನು ಹೇಳಿದ್ದಾರೆ. 2008ರಲ್ಲಿ ಬಿಜೆಪಿಗೆ ಹೋದರಲ್ಲ ಆಗ ಅವರು ಯಾರ ಮೇಲೆ ಬೇಸತ್ತಿದ್ದರು. ಆ ಮೇಲೆ ಮತ್ತೆ ಯಾಕೆ ಬಂದ್ರು, ನರಿ ಕಥೆ ತರ ದ್ರಾಕ್ಷಿ ಸಿಗದಿದ್ದರೆ ಹುಳಿ ಅಂತ ಹೇಳೋದು ಅದೇ ರೀತಿ ಅವರ ಕಥೆ ಎಂದು ವ್ಯಂಗ್ಯವಾಡಿದರು.

2023ರಲ್ಲಿ ಮಿಷನ್ 123 ನನ್ನ ಸ್ಪಷ್ಟ  ಕಾರ್ಯಕ್ರಮ, ಎಲ್ಲ ಕಡೆ ಗೆಲ್ಲುವ ನೀಲಿ ನಕ್ಷೆ ಸಿದ್ಧಪಡಿಸಿದ್ದೇನೆ. ಕೋವಿಡ್ ಅನಾಹುತದಲ್ಲಿ ಉಲ್ಲಂಘನೆ ಮಾಡಬಾರದೆಂದು ಪಕ್ಷ ಸಂಘಟನೆಗೆ ಹೊರಬಂದಿರಲಿಲ್ಲ, ವರ್ಚುವಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದೆ. ಕಲಬುರ್ಗಿಗೆ ಹೋಗಿದ್ದೆ ಇಲ್ಲಿಯವರೆಗೆ ನಡೆದ ಚುನಾವಣೆ ನೋಡಿದಾಗ ಈಗ ಅಲ್ಲಿನ ಕಾರ್ಯಕರ್ತರ ಹುಮ್ಮಸ್ಸು ಮೇಲ್ನೋಟದಲ್ಲಿ ಅವರು ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದಾರೆಂಬುದು ಚುನಾವಣೆಯಿಂದ ತಿಳಿಯಲಿದೆ.  ಚುನಾವಣೆ ಸಂಬಂಧ ಅಭ್ಯರ್ಥಿಗಳ ಮೊದಲನೆ ಪಟ್ಟಿ  ಸಿದ್ಧತೆ ಮಾಡಿದ್ದೇನೆ.ಸೆ,28ರಂದು ಎರಡು ದಿನಗಳ ಕಾರ್ಯಕ್ರಮ ನನ್ನ ಬಿಡದಿ ತೋಟದಲ್ಲಿ ಹಮ್ಮಿಕೊಂಡಿದ್ದು ಕಾರ್ಯಾಗಾರ ನಡೆಯಲಿದೆ. ನಾಡಿದ ಸಮಸ್ಯೆ ಏನು, ಯಾವ ರೀತಿ ಸಂಘಟನೆಯಲ್ಲಿ ಹೋಗಬೇಕು ಎಂಬುದನ್ನು ತರಬೇತಿ ನೀಡಲಾಗುವುದು. ಮೊದಲ ಪಟ್ಟಿಯಲ್ಲಿ 102ರ ಸಂಖ್ಯೆ ಸಿದ್ಧವಿದೆ. ಅಭ್ಯರ್ಥಿಗಳನ್ನು ಯಾರು ಮಾಡಬೇಕೆಂದು ಸೂಚನೆ ನೀಡಿ ಸಿದ್ಧತೆ ನಡೆಯುತ್ತಿದೆ ಎಂದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಆದೇಶ ಹಿನ್ನೆಲೆ ಕುರಿತು ಪ್ರತಿಕ್ರಿಯಿಸಿ ಇದೇ ಕಾರಣಕ್ಕೆ ನಾವು ಮೇಕೆದಾಟು ಯೋಜನೆ ಆರಂಭಿಸಬೇಕು ಅನ್ನುತ್ತಿರುವುದು. ಸಮುದ್ರಕ್ಕೆ ಹರಿದು ಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಬಹುದು. ಇದನ್ನು ಕೇಂದ್ರ ಮತ್ತು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು ಎಂದರು. ಕೇಂದ್ರ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಪ್ರಾಧಿಕಾರದ ಮನವೊಲಿಸಬೇಕು ಎಂದರು.

ದೇವೇಗೌಡರು ಸಿಎಂಗೆ ಮಾರ್ಗದರ್ಶನ ಮಾಡಿತ್ತಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ತೆಗೆದುಕೊಂಡ ನಂತರ ದೇವೇಗೌಡರನ್ನು ಭೇಟಿಯಾಗಿದ್ದರು. ನಂತರ ಯಾವುದೇ ಭೇಟಿ ಮಾಡಿಲ್ಲ. ದೂರವಾಣಿಯಲ್ಲೂ ಮುಖ್ಯಮಂತ್ರಿಗಳನ್ನು ದೇವೇಗೌಡರು ಸಂಪರ್ಕಿಸಿದ ಯಾವುದೇ ಮಾಹಿತಿ ಇಲ್ಲ. ಸಂಪರ್ಕವೇ ಇಲ್ಲದಿದ್ದಾಗ ಸಲಹೆ ಮಾರ್ಗದರ್ಶನ ವಿಚಾರ ಬರುವುದೇ ಇಲ್ಲ.ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗಿದೆ. ಈಗಾಗಲೇ ಸರ್ಕಾರ ನಡೆಯುತ್ತಿದೆ ಎಂಬದು ಹೇಳೋದು ಕಷ್ಟ. ಹಳೆ ಇಂಜಿನ್ ಕೆಟ್ಟು ಹೋಗಿದೆ ಎಂದು ಹೊಸ ಇಂಜಿನ್ ಹಾಕಲಾಗಿದೆ. ಆದರೆ ಬೋಗಿಯ ಇಂಜಿನ್‍ಗಳೆಲ್ಲವು ಕೊಳೆತು ಹೋಗಿವೆ. ಪರಿಸ್ಥಿತಿ ಹೀಗಿದ್ದಾಗ ಭ್ರಷ್ಟಾಚಾರ ಮುಕ್ತ ಆಡಳಿತ ಸಾಧ್ಯವೇ? ಇನ್ನೂ ಕೆಲವು ಸಚಿವರು ಕಛೇರಿಗೇ ಹೋಗಿಲ್ಲ, ಇನ್ನೂ ಸ್ವಲ್ಪ ದಿನ ಹೋಗಲಿ ಎಂದರು.

ಗಣೇಶ ಹಬ್ಬ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ  ಹಬ್ಬಕ್ಕೆ ಯಾವುದೇ ನಿರ್ಬಂಧ ಹಾಕಬೇಡಿ. ರಾಜಕಾರಣಿಗಳು ಸಮಾವೇಶ ಯಾತ್ರೆಗಳನ್ನು ಮಾಡುತ್ತಿಲ್ಲವಾ? ಹಿಂದೂಪರ ಎಂದು ಹೇಳುವ ಸರ್ಕಾರ ಗಣೇಶ ಹಬ್ಬಕ್ಕೆ ನಿರ್ಬಂಧ ಹಾಕಿದರೆ ಹೇಗೆ? ಇದು ಇವರ ಮನಸ್ಥಿತಿ ತೋರಿಸುತ್ತದೆ. ಮುಕ್ತವಾಗಿ ಗಣೇಶ ಹಬ್ಬ ಆಚರಿಸಲು ಅವಕಾಶ ಕೊಡಿ ಎಂದರು.      

ಈ ಸಂದರ್ಭ ಶಾಸಕ ಸಾ.ರಾ.ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News