ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಕಾಂಗ್ರೆಸ್‍ಗೆ ಇಲ್ಲ: ರಮೇಶ್ ಬಾಬು

Update: 2021-09-01 17:59 GMT

ಬೆಂಗಳೂರು, ಸೆ. 1: `ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಧರ್ಮದ ಹೆಸರಿನಲ್ಲಿ, ಪ್ರಚೋದನೆ, ಮುಸಲ್ಮಾನರ ಹೆಸರಿನಲ್ಲಿ ರಾಜಕೀಯ ಬದುಕಿನ ಅನಿವಾರ್ಯತೆ ಇರಬಹುದು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಅಂತಹ ಅನಿವಾರ್ಯತೆ ಅಥವಾ ಅವಶ್ಯಕತೆ ಎರಡೂ ಇರುವುದಿಲ್ಲ. ರಾಜಕೀಯದ ವಾಸ್ತವತೆ ಬಿಟ್ಟು ಮಾತನಾಡುವ ಹೇಳಿಕೆಗಳಿಗೆ ಗೌರವ ಇರುವುದಿಲ್ಲ' ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, `ರಾಜಕಾರಣದಲ್ಲಿ ಕೆಸರು ಎರೆಚಾಟ ಆರೋಗ್ಯಕರ ಬೆಳವಣಿಗೆ ಅಲ್ಲ. ಆದರೆ, ಆಡಳಿತದ ವೈಫಲ್ಯದಿಂದ ಕರ್ನಾಟಕದಲ್ಲಿ ಮತ್ತು ಕೇಂದ್ರದಲ್ಲಿ ಜನರ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿರುವ ಬಿಜೆಪಿ, ಕೆಸರು ಎರೆಚಾಟದ ವಿಭಾಗಗಳನ್ನು ರಾಜ್ಯ ಮಟ್ಟದಲ್ಲಿ ಮತ್ತು ಕೇಂದ್ರ ಮಟ್ಟದಲ್ಲಿ ತೆರೆದಿದ್ದು, ಸಿ.ಟಿ.ರವಿಯಂತಹ ಕೆಲವು ಅಬ್ಬೇಪಾರಿಗಳಿಗೆ ಪಕ್ಷದ ಪದಾಧಿಕಾರಿ ಸ್ಥಾನ ಹಾಗೂ ಕೆಲವರಿಗೆ ಮಂತ್ರಿ ಸ್ಥಾನ ನೀಡಿ ಉದ್ಯೋಗಕ್ಕೆ ಹಚ್ಚಿರುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

`ದೇಶದ ಸ್ವಾತಂತ್ರ್ಯ ಹೋರಾಟಗಾರ, ಮೊದಲ ಪ್ರಧಾನಿ ರಾಜಕೀಯ ಮುತ್ಸದಿ ಪಂಡಿತ್ ಜವಹರ್‍ಲಾಲ್ ನೆಹರು ಅವರ ಬಗ್ಗೆ ಪ್ರಚಾರಕ್ಕಾಗಿ ಹೇಳಿಕೆ ನೀಡಿ, ಇವರ ಹೇಳಿಕೆ ಕಾರಣಕ್ಕಾಗಿ ಅಟಲ್‍ಬಿಹಾರಿ ವಾಜಪೇಯಿರವರ ಹೆಸರು ರಾಜಕೀಯ ಚರ್ಚೆಗೆ ಕಾರಣವಾಗಿ, ಕೊನೆಗೆ ದಿಲ್ಲಿಯಲ್ಲಿ ಸ್ಪಷ್ಟೀಕರಣ ನೀಡಿದ ಸಿ.ಟಿ.ರವಿ ಇನ್ನೂ ತಮ್ಮ ಅಪ್ರಬುದ್ಧ ಹೇಳಿಕೆಗಳನ್ನು ಮುಂದುವರೆಸಿರುವುದು ನಾಚಿಕೆಗೇಡಿನ ಸಂಗತಿ. ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಕಾಂಗ್ರೆಸ್ ಪಕ್ಷದ ಹೆಸರನ್ನು ಬಳಸಿರುವ ಸಿ.ಟಿ.ರವಿ, ದತ್ತ ಪೀಠದ ಹೆಸರಿನಲ್ಲಿ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ಅದೇ ರೀತಿ ಧರ್ಮದ ಹೆಸರಿನಲ್ಲಿ ರಾಜಕೀಯ ಬದುಕನ್ನು ಕಂಡುಕೊಂಡಿದ್ದಾರೆ. ಮೈಸೂರಿನ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಆ ಸಮಯದಲ್ಲಿ ಅಲ್ಲಿಗೆ ಹೋಗಬಾರದಿತ್ತೆಂದು ಹೇಳಿಕೆ ನೀಡುವ ಮೂಲಕ ಬಿಜೆಪಿಯ ಗೃಹ ಸಚಿವರು, ಅದೇ ರೀತಿ ಕೆಲವು ಬಿಜೆಪಿ ನಾಯಕರು ತಾವು ತಾಲಿಬಾನಿಗಳ ಮುಂದುವರೆದ ಭಾಗವೆಂದು ಒಪ್ಪಿಕೊಂಡಿರುತ್ತಾರೆ' ಎಂದು ರಮೇಶ್ ಬಾಬು ಲೇವಡಿ ಮಾಡಿದ್ದಾರೆ.

`ತಾಲಿಬಾನಿಗಳೊಂದಿಗೆ ಪೈಪೋಟಿ ಮಾಡುವ ರೀತಿಯಲ್ಲಿ ಸಿ.ಟಿ.ರವಿಯಂತಹ ಕೆಲವು ನಾಯಕರು ಧರ್ಮ ಪ್ರಚೋದನೆಗೆ ಪ್ರಯತ್ನಿಸುತ್ತಿದ್ದಾರೆ. ರಾಷ್ಟ್ರೀಯ ಚಳುವಳಿಯಲ್ಲಿ ಕಾಂಗ್ರೆಸ್ ತನ್ನನ್ನು ತಾನು ತೊಡಗಿಸಿಕೊಂಡು ಜನಪರ ಹೋರಾಟ ಮಾಡುವಾಗ ಸಂಘ ಪರಿವಾರದ ಮತ್ತು ಜನಸಂಘದ ಸದಸ್ಯರು ಬ್ರಿಟಿಷರೊಂದಿಗೆ ಕೈಜೋಡಿಸಿದ್ದು ಇತಿಹಾಸ. ಸಿ.ಟಿ.ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಾಗ ಇವರು ಒಬ್ಬ ರಾಷ್ಟ್ರೀಯ ನಾಯಕರಾಗಿ, ಪ್ರಬುದ್ಧ ನಾಯಕರಾಗಿ ಬೆಳೆಯಬಹುದೆಂಬ ಅನಿಸಿಕೆ ರಾಜ್ಯದ ಜನರಲ್ಲಿ ಇತ್ತು. ಆದರೆ, ಹರಕುಬಾಯಿ ಬಳಕೆಗಾಗಿ ಸಂಘ ಪರಿವಾರ ಇವರಿಗೆ ಈ ಹುದ್ದೆ ನೀಡಿರಬಹುದೆಂಬ ಅನುಮಾನ ಈಗ ಬಯಲಾಗುತ್ತಿದೆ. ಇಂತಹ ಅಪಕ್ವ ಹೇಳಿಕೆಗಳಿಂದ, ಧರ್ಮಾಧಾರಿತ ಟೀಕೆಗಳಿಂದ ಕಾಂಗ್ರೆಸ್ ಪಕ್ಷವನ್ನು ಹಣಿಸಬಹುದೆಂಬ ಮನೋವ್ಯಾಕುಲತೆಯಿಂದ ಇವರು ಮತ್ತು ಸಂಘ ಪರಿವಾರ ಆಚೆ ಬರುವುದು ಒಳಿತು ಎಂದು ರಮೇಶ್ ಬಾಬು ಸಲಹೆ ಮಾಡಿದ್ದಾರೆ.

`ಬಿಜೆಪಿ ತನ್ನ ಆಡಳಿತ ವೈಫಲ್ಯ, ಗುಂಪುಗಾರಿಕೆ ಮುಚ್ಚಿಕೊಳ್ಳಲು ಮತ್ತು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪದತ್ಯಾಗ ಮಾಡಿದ ನಂತರ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಅಪ್ರಬುದ್ಧ ಹೇಳಿಕೆಗಳನ್ನು ಕೊಡಿಸುವ ಮೂಲಕ ಕೆಸರು ಎರೆಚಾಟಕ್ಕೆ ಮುಂದಾಗಿದೆ. ಸಂಘ ಪರಿವಾರದ ರಾಷ್ಟ್ರೀಯ ಪ್ರಮುಖರು ಇತ್ತೀಚೆಗೆ ಹೇಳಿಕೆ ನೀಡಿ ಮುಸ್ಲಿಮರು ಈ ರಾಷ್ಟ್ರದ ಭಾಗ ಎಂದು ಹೇಳಿದ್ದರು. ಬಹುಶಃ ಸಂಘ ಪರಿವಾರದ ಪ್ರಮುಖರು ಸಿ.ಟಿ.ರವಿ ಅವರನ್ನು ಸಂಘ ಪರಿವಾರದ ಪ್ರಮುಖ ಸಲಹೆಗಾರರಾಗಿ ನೇಮಿಸಿಕೊಂಡು ತಮ್ಮ ನೀತಿ ನಿರೂಪಣೆಗಳನ್ನು ಇವರ ಅಣತಿಯಂತೆ ಮಾಡಲಿ ಸರಕಾರ ನಡೆಸುವವರು ಕೆಸರು ಎರಚಾಟಕ್ಕೆ ಮುಂದಾದರೆ, ಪ್ರಜಾಪ್ರಭುತ್ವದಲ್ಲಿ ಇವರನ್ನು ಬೆತ್ತಲೆಗೊಳಿಸಲು ವಿಪಕ್ಷಗಳು ಸಮರ್ಥವಾಗಿವೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News