ನೆಹರೂ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಸಿ.ಟಿ. ರವಿಗೆ ಇಲ್ಲ: ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ

Update: 2021-09-02 16:48 GMT

ಶಿವಮೊಗ್ಗ, ಸೆ.02: ನೆಹರೂ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ  ಸಿ.ಟಿ. ರವಿಗೆ ಇಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ ರವಿಗೆ ಯಾವ ನೈತಿಕತೆ ಇದೆಯೋ ಗೊತ್ತಿಲ್ಲ. ನೆಹರೂ ಕಟುಉಂಬದ ಬಗ್ಗೆ ಮಾತನಾಡುವ ಯೋಗ್ಯತೆ ಕೂಡ ಈತನಿಗೆ ಇಲ್ಲ. ಈತ ಮಾತನಾಡಬೇಕು ಎಂದರೆ, ಅವರ ಪಕ್ಷದವರ ಘನ ಕಾರ್ಯಗಳನ್ನು ನೆನಪಿಸಿಕೊಳ್ಳಲಿ. ಸದನದಲ್ಲಿ ಬ್ಲೂಫಿಲ್ಮ್ ನೋಡಿದವರ ಬಗ್ಗೆ ಮಾತನಾಡಲಿ. ಜಾರಕಿಹೊಳಿ ನೆನಪು ಮಾಡಿಕೊಳ್ಳಲಿ, ಸ್ನೇಹಿತನ ಮನೆಗೆ ಹೋಗಿ ಅತ್ಯಾಚಾರ ಮಾಡಿದವರ ಬಗ್ಗೆ ಮತ್ತೆ ಮಾತನಾಡಲಿ. ಅದನ್ನು ಬಿಟ್ಟು ನೆಹರೂ ಕುಟುಂಬದ ಬಗ್ಗೆ ಮಾತನಾಡುತ್ತಿರುವುದು ಎಂತಹ ವಿಪರ್ಯಾಸ. ಜವಾಬ್ದಾರಿ ಹುದ್ದೆಯಲ್ಲಿರುವ ಅವರು ಹೀಗೆ ಮಾತನಾಡುತ್ತಿರುವುದು ಖಂಡನೀಯ ಎಂದರು.

ಬಿಜೆಪಿ ಅನೇಕರು ಸೇರಿಕೊಂಡು ನಮ್ಮ ಜಿಲ್ಲೆಯವರೇ ಆದ ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಇದು ನಿಜಕ್ಕೂ ಮೋಸವೇ ಸರಿ. ಇಷ್ಟಾದರೂ ಯಡಿಯೂರಪ್ಪ ಅವರು ನಾನು ತ್ಯಾಗ ಮಾಡಿದೆ ಎಂದು ಹೇಳುತ್ತಾರೆ. ಹೀಗೆ ತ್ಯಾಗ ಮಾಡಿದವರು ಅಧಿಕಾರದಿಂದ ಇಳಿಯುವಾಗ ಕಣ್ಣೀರು ಹಾಕಿದ್ದು ಏಕೆ? ಅವರ ಅಸಮಾಧಾನ ಕಣ್ಣೀರಿನ ಮೂಲಕ ಎದ್ದು ಕಾಣುತ್ತಿದೆ. ಸಂತೋಷ್, ಜೋಶಿ ಮುಂತಾದವರೆಲ್ಲ ಸೇರಿ ಅವರನ್ನು ಕೆಳಗಿಳಿಸಿದರು ಎಂದು ದೂರಿದರು.

ಬಿಜೆಪಿ ಸರ್ಕಾರದಲ್ಲಿ ಜನರು ಬದುಕುವ ಹಾಗೇ ಇಲ್ಲ :

ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಬಡವರ ಬದುಕು ಭಾರವಾಗುತ್ತಾ ಹೋಗುತ್ತಿದೆ. ತೈಲ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ನಿಯಂತ್ರಿಸಬೇಕಾದ ಸರ್ಕಾರಗಳೇ ಬೆಲೆ ಏರಿಕೆಗೆ ಪೂರಕವಾಗಿ ವರ್ತಿಸುತ್ತಿವೆ. ಮೋದಿ ಹೇಳಿದ ಒಳ್ಳೆದಿನಗಳು ಮೂಲೆ ಸೇರಿದೆ. ಸಾಮಾನ್ಯ ಜನರ ಶಾಪ ಮೋದಿ ಸೇರಿದಂತೆ ಬಿಜೆಪಿ ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದರು.

ಜನಾಶೀರ್ವಾದಕ್ಕೆ ಇಲ್ಲದ ನಿರ್ಬಂಧ ಗಣೇಶೋತ್ಸವಕ್ಕೆ ಯಾಕೆ:

ರಾಜ್ಯ ಸರ್ಕಾರ ಸಾವಿರಾರು ಜನರನ್ನು ಸೇರಿಸಿಕೊಂಡು ಜನಾಶೀರ್ವಾದ ಕಾರ್ಯಕ್ರಮ ಮಾಡಬಹುದು. ಆದರೆ, ನೂರಾರು ಜನ ಸೇರುವ ಗಣೇಶ ಹಬ್ಬವನ್ನು ಮಾತ್ರ ಮಾಡುವ ಹಾಗಿಲ್ಲ. ಇದು ಹಿಂದುಗಳ ಭಾವನೆಗೆ ಧಕ್ಕೆ ತರುವಂತಹುದು. ಬಿಜೆಪಿಯವರು ಮಾತ್ರ ಜನ ಸೇರಿಸಬಹುದು. ಗಣೇಶನ ಭಕ್ತರು ಮಾತ್ರ ಸೇರುವ ಹಾಗಿಲ್ಲ. ಇದೆಂಥ ನ್ಯಾಯ? ಕೊನೆ ಪಕ್ಷ ಒಂದು ದಿನದ ಗಣೇಶೋತ್ಸವಕ್ಕಾದರೂ ಸರ್ಕಾರ ಅನುಮತಿ ನೀಡಬೇಕು ಎಂದರು.

ರಾಜ್ಯದಲ್ಲಿ ಸರ್ಕಾರ ಬಿದ್ದು ಹೋಗಿದೆ. ನೆರೆ ಪರಿಹಾರ ಕಳೆದ ಎರಡು ವರ್ಷಗಳಿಂದ ಇನ್ನೂ ಬಿಡುಗಡೆಯಾಗಿಲ್ಲ. ರೈತರ ಮುರಿದು ಬಿದ್ದ ಕೊಟ್ಟಿಗೆಗಳು ನೆಟ್ಟಗಾಗಿಲ್ಲ. ಬಿದ್ದ ಮನೆಗಳನ್ನು ಕಟ್ಟಲಾಗುತ್ತಿಲ್ಲ. ಎಷ್ಟೋ ಜನ ಜೀವ ಕಳೆದುಕೊಂಡಿದ್ದಾರೆ. ಪರಿಹಾರ ನೀಡುತ್ತೇನೆ ಎಂದ ಸರ್ಕಾರ ಆದೇಶ ಕಾಗದದಲ್ಲೇ ಇದೆ ಎಂದು ದೂರಿದರು.

ಸಾಗರ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಸಾಂಸ್ಕೃತಿಕ ನಾಡಾಗಿದ್ದ ಸಾಗರದಲ್ಲಿ ಇಂದು ಪ್ರತಿ ಹೆಜ್ಜೆಗೂ ಬಾರ್ ಗಳು ಸಿಗುತ್ತವೆ. ಓಸಿ, ಗಾಂಜಾ ಎಗ್ಗಿಲ್ಲದೇ ಸಾಗುತ್ತಿದೆ. ಇದಕ್ಕೆಲ್ಲ ಇಲ್ಲಿನ ಶಾಸಕರ ಸಹಕಾರವೇ ಕಾರಣವಾಗಿದೆ. ಅವರು ಸಾಗರವನ್ನು ಕುಡುಕರ ಸಾಮ್ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. 

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕುರಿತು ನಾನು ಹೆಬ್ಬೆಟ್ಟು ಎಂದು ಹೇಳಿಲ್ಲ. ಅದನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾನು ಹೆಬ್ಬೆಟ್ಟು ಎಂದು ಹೇಳಿರುವುದು ಅವರು ರಬ್ಬರ್ ಸ್ಟ್ಯಾಂಪ್ ಎಂಬ ಅರ್ಥದಲ್ಲಿ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಸಾಗರದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಚಿನ್ಮಯ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News