ಪ್ರಧಾನಿ ನೇತೃತ್ವದ ಕೊರೋನ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿದೆ: ಗೃಹ ಸಚಿವ ಅಮಿತ್ ಶಾ

Update: 2021-09-02 17:10 GMT

ದಾವಣಗೆರೆ ಸೆ. 02: ವಿಶ್ವಕ್ಕೆ ಕೊರೋನ ಮಹಾಮಾರಿಯಿಂದಾಗಿ ದೊಡ್ಡ ಸಂಕಷ್ಟ ಎದುರಾದ ಸಂದರ್ಭದಲ್ಲಿ  ಭಾರತದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೊರೋನ ವಿರುದ್ದ ಹೋರಾಟ ನಡೆಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ದೇಶದ ಜನರ ಸಹಕಾರವು ಕಾರಣವಾಗಿದೆ  ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಹೇಳಿದರು. 

ನಗರದ ಜಿಎಂಐಟಿ ಆವರಣದಲ್ಲಿ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಪೊಲೀಸ್ ವಸತಿ ಗೃಹ ಸಮುಚ್ಚಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  

ಕೊರೋನ ವಾರಿಯರ್ಸ್‍ಗಳಾದ ವೈದ್ಯರು, ಪೌರ ಕಾರ್ಮಿಕರು ಜೀವವನ್ನು ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ಯಶಸ್ವಿಯಾದೆವು. ಆದರೆ, ಹಲವರನ್ನು ಕಳೆದುಕೊಳ್ಳಬೇಕಾಯಿತು. ಪ್ರಧಾನಿ ನರೇಂದ್ರ ಮೋದಿಯವರು ದೇಶದ 80 ಕೋಟಿ ಜನರಿಗೆ 10 ತಿಂಗಳ ಕಾಲ ಉಚಿತ ಪಡಿತರ ವಿತರಿಸುವ ದಿಟ್ಟ ಕೆಲಸ ಮಾಡಿದ್ದಾರೆ. ಸಾವಿರಾರು ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. ಕೋವಿಡ್ 2ನೇ ಅಲೆಯಲ್ಲಿ ಕೊಂಚ ಆಕ್ಸಿಜನ್ ಸಮಸ್ಯೆಯಾಗಿದ್ದರೂ, ತದನಂತರ ಸಮರೋಪಾದಿಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಭವಿಷ್ಯದಲ್ಲಿ ಯಾವುದೇ ಮಹಾಮಾರಿ ಬಂದರೂ ಆಕ್ಸಿಜನ್ ಸಮಸ್ಯೆಯಾಗದಂತೆ ಎದುರಿಸುವ ಶಕ್ತಿ ಭಾರತಕ್ಕೆ ಬಂದಿದೆ ಎಂದು ಅವರು ಹೇಳಿದರು.

ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಒಂದೇ ದಿನಕ್ಕೆ 1.60 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ದಾಖಲೆ ಬರೆಯಲಾಗಿದೆ. ರಾಜ್ಯದಲ್ಲಿ 5.20 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 4 ಕೋಟಿ ಜನರು 1ನೇ ಡೋಸ್, 1.20 ಕೋಟಿ ಮಂದಿ 2ನೇ ಡೋಸ್ ಪಡೆದಿದ್ದಾರೆ ಎಂದರು. 

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರೈತರು ಹಾಗೂ ಬಡಜನರಿಗಾಗಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರ ಅವಧಿಯಲ್ಲಿ ಕರ್ನಾಟಕದ ವಿಕಾಸವಾಗಿದೆ. ಗ್ರಾಮಾಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ಬಸವರಾಜ್ ಬೊಮ್ಮಾಯಿ ಕರ್ನಾಟಕದ ಸಿಎಂ ಆಗಿದ್ದಾರೆ. ವಿಐಪಿ ಸೌಲಭ್ಯದಿಂದ ದೂರ ಉಳಿದಿದ್ದಾರೆ. ಅಲ್ಲದೇ, ಸರಳ ರೀತಿಯ ಜೀವನದ ಜೊತೆಗೆ ಉತ್ತಮ ಆಡಳಿತ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸ್ಥಾನದೊಂದಿಗೆ ಬಿಜೆಪಿ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದರು.   

ಕೋವಿಡ್ ನಿರೋಧಕ ಲಸಿಕೆಗೆ ಕೆಲವಡೆ ವಿರೋಧ ವ್ಯಕ್ತವಾಗುತ್ತಿರುವ ಮಾತುಗಳಿವೆ. ಎಲ್ಲರೂ ಯಾವುದೇ ಅನುಮಾನ, ಆತಂಕವಿಲ್ಲದೆ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕಾರಣವನ್ನು ಶೇ.100ರಷ್ಟು ಯಶಸ್ವಿಗೊಳಿಸಿ ಮಹಾಮಾರಿ ಕೊರೋನಾ ವಿರುದ್ಧ ವಿಜಯ ಸಾಧಿಸೋಣ ಎಂದರು. 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 03 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆಯಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನ, ಪೊಲೀಸ್ ಇಲಾಖೆಯಿಂದ ಕೊಂಡಜ್ಜಿ ಬಳಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಗಳಿಗಾಗಿ 14.91 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಸತಿಗೃಹ ಸಮುಚ್ಚಯದ ಉದ್ಘಾಟನೆ ನಗರದ ಜಿಎಂಐಟಿ ಆವರಣದಲ್ಲಿ ನೆರವೇರಿತು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ , ಗೃಹ ಸಚಿವ ಅರಗ ಜ್ಞಾನೇಂದ್ರ,  ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಅವರು ಉಪಸ್ಥಿತರಿದ್ದರು. ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. 

ಶಾಸಕರಾದ ಕೆ. ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಪ್ರೊ. ಎನ್. ಲಿಂಗಣ್ಣ, ಎಂ.ಪಿ. ರೇಣುಕಾಚಾರ್ಯ, ಎಂ. ರಾಮಪ್ಪ, ಕರುಣಾಕರ ರೆಡ್ಡಿ, ವಿಪ ಸದಸ್ಯ ಮೋಹನ್‍ಕುಮಾರ್ ಕೊಂಡಜ್ಜಿ, ಎನ್. ರವಿಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್. ಹರ್ಷ, ಡಿಸಿ ಮಹಾಂತೇಶ್ ಬೀಳಗಿ, ಜಿಪಂ ಸಿಇಒ ವಿಜಯ ಮಹಾಂತೇಶ್, ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ಹೋರಾಟಗಾರ ರಾದ ಶಿವಲಿಂಗಸ್ವಾಮಿ, ಮರುಳಸಿದ್ದಪ್ಪ, ತಿರುವಳಿಶೆಟ್ಟರ, ಸಿದ್ರಾಮಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News