×
Ad

ಬೆಂಗಳೂರು: 57 ದಿನಕ್ಕೆ ಕಾಲಿಟ್ಟ ನಿಮ್ಹಾನ್ಸ್ ನೌಕರರ ಧರಣಿ

Update: 2021-09-02 23:02 IST

ಬೆಂಗಳೂರು, ಸೆ.2: ಕಾನೂನು ಬಾಹಿರವಾಗಿ ವಜಾಗೊಳಿಸಿರುವ ಆಡಳಿತ ಮಂಡಳಿಯ ಕ್ರಮ ವಿರೋಧಿಸಿ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯುರೋ ಸೈನ್ಸಸ್(ನಿಮ್ಹಾನ್ಸ್) ಆಸ್ಪತ್ರೆಯ ಗುತ್ತಿಗೆ ಸಹಾಯಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಇಂದಿಗೆ 57ನೆ ದಿನಕ್ಕೆ ಕಾಲಿಟ್ಟಿದೆ.

ನಗರದ ನಿಮ್ಹಾನ್ಸ್ ಆಸ್ಪತ್ರೆಯ ಆವರಣದಲ್ಲಿ ನಿಮ್ಹಾನ್ಸ್ ಪ್ರಗತಿಪರ ವರ್ಕರ್ಸ್ ಯೂನಿಯನ್(ಎಐಸಿಸಿಟಿಯು) ನೇತೃತ್ವದಲ್ಲಿ ಸತತ 56 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದು, ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಂಡು, ತಮ್ಮ ಬೇಡಿಕೆ ಈಡೇರಿಸಲು ಮುಂದಾಗಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ.ಬಸವರಾಜು, ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ 19 ಸಹಾಯಕರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಲಾಗಿದೆ. ಆ ಕಾರ್ಮಿಕರಲ್ಲಿ 15 ಜನ ಮಹಿಳೆಯರಾಗಿದ್ದಾರೆ ಎಂದು ಹೇಳಿದರು.

ಕೋವಿಡ್ ಸಂಬಂಧ ರಾಜ್ಯ ಸರಕಾರ ಜಾರಿಗೊಳಿಸಿದ್ದ ರಾತ್ರಿ ಕರ್ಫ್ಯೂ ಹಿನ್ನೆಲೆ ಯಾರೂ ಪ್ರಯಾಣಿಸದಂತೆ ನಿಮ್ಹಾನ್ಸ್ ಆಡಳಿತ ಮಂಡಳಿ ಆದೇಶಿಸಿತ್ತು. ಇದಾದ ಬಳಿಕ, ಕಾರ್ಮಿಕರು ರಾತ್ರಿ 9.30 ಗಂಟೆವರೆಗೂ ಕೆಲಸ ಮಾಡಬೇಕೆಂದು ಹೇಳಿದರು. ಇದಕ್ಕೆ ಸಮ್ಮತಿ ಸೂಚಿಸಿದ ಹಲವು ನೌಕರರು, ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಕೋರಿದ್ದರು. ಆದರೆ, ಈ ಬೇಡಿಕೆ ತಿರಸ್ಕರಿಸಿದ ನಿಮ್ಹಾನ್ಸ್ ಆಡಳಿತ ಮಂಡಳಿ ಜು.9ರಂದು ಏಕಾಏಕಿ ಉದ್ಯೋಗದಿಂದ ವಜಾಗೊಳಿಸಿದೆ ಎಂದು ಆರೋಪಿಸಿದರು.

ಅಲ್ಲದೆ, ರಾಜ್ಯ ಸರಕಾರವೂ ಅಧಿಸೂಚನೆಯೊಂದನ್ನು ಹೊರಡಿಸಿದ್ದು, ಮಹಿಳಾ ಕಾರ್ಮಿಕರು ಸಂಜೆ 7 ಗಂಟೆಯ ನಂತರದ ಪಾಳಿಯಲ್ಲೂ ಕೆಲಸ ಮಾಡಬಹುದೆಂದು ಆದೇಶಿಸಿದೆ. ಒಂದು ವೇಳೆ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರು ಕೆಲಸ ಮಾಡಬೇಕೆಂದರೆ ಆಡಳಿತ ಮಂಡಳಿ ಸಾರಿಗೆ ವ್ಯವಸ್ಥೆಯನ್ನು ರೂಪಿಸಬೇಕು ಮತ್ತು ಸಾರಿಗೆಯಲ್ಲಿ ಸಿಸಿಟಿವಿ ಕ್ಯಾಮರಾ ಇರಬೇಕು, ಹಾಗೂ ಇತರೆ ರಕ್ಷಣೆಗಳನ್ನು ಒದಗಿಸಿದರೆ ಮಾತ್ರ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ. ಆದರೆ, ನಿಮ್ಹಾನ್ಸ್ ಆಡಳಿತ ಮಂಡಳಿ ಇದರ ವಿರುದ್ಧವಾಗಿ ನಡೆದುಕೊಂಡು ಕಾರ್ಮಿಕರಿಗೆ ಅನ್ಯಾಯವೆಸಗಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News