×
Ad

ಬಳ್ಳಾರಿ: ಕೋವಿಡ್ ಲಸಿಕೆಗೆ ಭಯಪಟ್ಟು ಮರವೇರಿ ಕುಳಿತ ವ್ಯಕ್ತಿ

Update: 2021-09-02 23:07 IST

ಬಳ್ಳಾರಿ, ಸೆ. 2: ಕೊರೋನ ಸೋಂಕಿನಿಂದ ರಕ್ಷಣೆ ಪಡೆಯಲು ಲಸಿಕೆಯೊಂದೆ ಪರಿಹಾರ ಎಂದು ಸರಕಾರ ಜಾಗೃತಿ ಮೂಡಿಸುತ್ತಿದೆ. ಆದರೆ, ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ `ಲಸಿಕೆ'ಗೆ ಭಯಪಟ್ಟ ವ್ಯಕ್ತಿಯೊಬ್ಬ ಮರವೇರಿ ಕುಳಿತ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.

ಬೈಲೂರು ಗ್ರಾಮದ ಹುಲೆಪ್ಪ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಭಯಪಟ್ಟು ಮರವೇರಿದ ವ್ಯಕ್ತಿ ಎಂದು ಗೊತ್ತಾಗಿದೆ. ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಸಹಾಯಕರು ಗ್ರಾಮದ ಮನೆಗಳಿಗೆ ತೆರಳಿ ಲಸಿಕೆ ಹಾಕಲು ಮುಂದಾಗಿದ್ದಾರೆ. ಸಿಬ್ಬಂದಿ ಮನೆಗೆ ಬರುವುದನ್ನು ಗಮನಿಸಿದ ಹುಲೆಪ್ಪ ಮನೆಯ ಕೂಗಳತೆ ದೂರದಲ್ಲಿರುವ ಮರದ ಮೇಲೇರಿ ಕುಳಿತಿದ್ದ ಎಂದು ಹೇಳಲಾಗಿದೆ.

ಕೂಡಲೇ ವಿಷಯ ತಿಳಿದ ಗ್ರಾಮಲೆಕ್ಕಾಧಿಕಾರಿ ಮಂಜಪ್ಪ ಮತ್ತು ಗ್ರಾಮದ ಮುಖಂಡರು ಹುಲೆಪ್ಪನ ಮನವೊಲಿಸಿ ಮರದಿಂದ ಕೆಳಗಿಳಿಸಿ ಲಸಿಕೆ ಹಾಕಿಸಿದ್ದಾರೆ. ಬಳಿಕ ಈ ಬಗ್ಗೆ ಮಾತನಾಡಿರುವ ಹುಲೆಪ್ಪ, `ಕೋವಿಡ್ ಲಸಿಕೆ ಹಾಕಿಸಿಕೊಂಡರೆ ವಿಪರೀತ ಜ್ವರ, ಮೈ-ಕೈ ನೋವು ಕಾಣಿಸಿಕೊಳ್ಳುತ್ತದೆ. ಕೆಲವರು ಸತ್ತಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ನೋಡಿದ್ದೆ. ಹೀಗಾಗಿ ನನಗೆ ಲಸಿಕೆಯ ಭಯವಿತ್ತು. ಆದುದರಿಂದ ಮರವೇರಿದ್ದೆ.

ಆದರೆ, ಇದೀಗ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ನನಗೆ ಸೂಕ್ತ ತಿಳುವಳಿಕೆ ನೀಡಿದ್ದಾರೆ. ಹೀಗಾಗಿ ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆದುಕೊಳ್ಳಲು ನಾನು ಲಸಿಕೆ ಪಡೆದುಕೊಂಡಿದ್ದೇನೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಏನು ಆಗುವುದಿಲ್ಲ ಎನ್ನುವುದು ಗೊತ್ತಾಗಿದೆ. ಹೀಗಾಗಿ ನನಗೆ ಸಂತಸವಾಗಿದೆ. ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದು ಇದೇ ವೇಳೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News