ಸರಕಾರಿ ನಿವಾಸಕ್ಕಾಗಿ ಭಿಕ್ಷೆ ಬೇಡುತ್ತಿಲ್ಲ: ಸಭಾಪತಿ ಬಸವರಾಜ ಹೊರಟ್ಟಿ
ಹುಬ್ಬಳ್ಳಿ, ಸೆ.3: ನಾನು ರಾಜ್ಯ ಸರಕಾರದ ಮುಂದೆ ಭಿಕ್ಷೆ ಬೇಡುತ್ತಿಲ್ಲ. ತನಗೆ ಸರಕಾರಿ ನಿವಾಸ ಕೊಡುವಂತೆ ಈಗಾಗಲೆ ಹಲವು ಬಾರಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದೇನೆ. ಇವತ್ತು ಮತ್ತೆ ಪತ್ರ ಬರೆಯುತ್ತೇನೆ. ಇದು ನನ್ನ ಕೊನೆಯ ಪತ್ರವಾಗಿರಲಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜ್ಯ ಸರಕಾರ ಮನೆ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ. ಇನ್ನು ಮುಂದೆ ಯಾವತ್ತೂ ನಾನು ಸರಕಾರದ ಬಳಿ ಮನೆ ವಿಚಾರ ಪ್ರಸ್ತಾಪ ಮಾಡುವುದಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಮೌಲ್ಯಧಾರಿತ ರಾಜಕಾರಣ ಕುಸಿಯುತ್ತಿದೆ. ಜನರ ಆಶೀರ್ವಾದದಿಂದ ಗೆಲ್ಲುವಂತಹ ಅಭ್ಯರ್ಥಿಗಳು ಸ್ವಾರ್ಥ ಸಾಧನೆ ಬಿಟ್ಟು, ಅಭಿವೃದ್ಧಿಯತ್ತ ಗಮನ ಹರಿಸಬೇಕು. ಜನಪರವಾದ ಕೆಲಸ ಎಲ್ಲಿಯವರೆಗೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಇದು ಹೀಗೆಯೆ ಮುಂದುವರೆಯುತ್ತಿರುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 1 ರಿಂದ 6ನೆ ತರಗತಿಯವರೆಗೆ ಶಾಲೆಗಳನ್ನು ಆರಂಭಿಸಬೇಕಾದ ಅಗತ್ಯವಿದೆ. ನಾನು ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರಿಗೂ ಇದೇ ಸಲಹೆಯನ್ನು ನೀಡಿದ್ದೆ. ಶಿಕ್ಷಕರ ವರ್ಗಾವಣೆ ಅರ್ಧ ತಾಸಿನ ಕೆಲಸ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಆಗದೆ ನೂರಾರು ಕಡತಗಳು ಬಾಕಿ ಉಳಿದುಕೊಂಡಿವೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
ವಿಧಾನ ಪರಿಷತ್ ಸಭಾಪತಿಯಾಗಿ 6 ತಿಂಗಳು ಕಳೆದರೂ ಬಸವರಾಜ ಹೊರಟ್ಟಿಯವರಿಗೆ ಸರಕಾರದ ಅಧಿಕೃತ ನಿವಾಸ ದೊರೆತಿಲ್ಲ. ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಸ್ತುತ ಅವರು ಶಾಸಕರ ಭವನದಲ್ಲಿರುವ ತಮ್ಮ ಕೊಠಡಿಯಲ್ಲೆ ಉಳಿದುಕೊಂಡಿದ್ದಾರೆ. ಈ ಹಿಂದಿನ ಸಭಾಪತಿಗಳಿಗೆ ಗಾಂಧಿ ಭವನದ ಸಮೀಪ ಸರಕಾರಿ ನಿವಾಸ ನೀಡಲಾಗಿತ್ತು.