ಪೆಟ್ರೋಲ್, ಡೀಸೆಲ್ ಬೆಲೆ ನಿಧಾನವಾಗಿ ಇಳಿಯಲಿದೆ: ಸಚಿವ ಆರ್.ಅಶೋಕ್

Update: 2021-09-03 12:00 GMT

ಬೆಂಗಳೂರು, ಸೆ. 3: `ರಾಜ್ಯದಲ್ಲಿ ನಿಧಾನವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಯುತ್ತಿದೆ. ಈ ಬಗ್ಗೆ ಯಾವುದೇ ಕಾರಣಕ್ಕೂ ಜನರು ಆತಂಕಪಡುವ ಅಗತ್ಯವಿಲ್ಲ. ಕೆಲವು ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗಲಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಳೆ(ಸೆ.4) ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟದಲ್ಲಿ ತಮಿಳುನಾಡು ಮಾದರಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮೇಲಿನ `ಸೆಸ್' ಇಳಿಕೆ ಸಂಬಂಧ ಚರ್ಚಿಸುವ ಸಾಧ್ಯತೆಗಳ ಬಗ್ಗೆ ನನಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಯಲಿದೆ ಎಂದರು.

ಸೂಟ್‍ಕೇಸ್ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ: `ಬಿಜೆಪಿಯಲ್ಲಿ ಸೂಟ್‍ಕೇಸ್ ಸಂಸ್ಕೃತಿ ಇಲ್ಲ. ಅದೆನಿದ್ದರೂ ಜೆಡಿಎಸ್ ಪಕ್ಷ ಮಾತ್ರ. ಬಿಜೆಪಿಯಲ್ಲಿ ಹಣ ಕೊಡುವ ಮತ್ತು ಪಡೆಯುವ ಸಂಸ್ಕೃತಿ ಹಿಂದೆಯೂ ಇಲ್ಲ, ಈಗಲೂ ಇಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಬಗ್ಗೆ ಆರೋಪ ಮಾಡಿದ್ದು ಸರಿಯಲ್ಲ' ಎಂದು ಅಶೋಕ್ ಇದೇ ವೇಳೆ ಆಕ್ಷೇಪಿಸಿದರು.

ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: `ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿಯು ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲಿದೆ' ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಮ್ಮ ಬೆಂಬಲವಿದೆ. ಸಿಎಂ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು ಸಹಜ. ಶಾ ಹೇಳಿಕೆ ಸರಿಯಾಗಿಯೇ ಇದೆ. ಅವರ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ' ಎಂದರು.

`ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಮ್ಮೆಲ್ಲರ ಅಗ್ರ ನಾಯಕ. ಅವರು ಪಕ್ಷದ ಶಿಸ್ತಿನ ಸಿಪಾಯಿ. ಅವರು ಪಕ್ಷದ ನಾಯಕರ ಜತೆ ಚರ್ಚಿಸಿದ ಬಳಿಕ, ರಾಜ್ಯ ಪ್ರವಾಸ ಕೈಗೊಳ್ಳುವ ಕುರಿತು ನಿರ್ಧರಿಸಲಿದ್ದಾರೆ. ಈ ಬಗ್ಗೆ ಸಿಎಂ, ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚರ್ಚಿಸಲಿದ್ದಾರೆ. ಯಡಿಯೂರಪ್ಪ ಅವರನ್ನು ಪಕ್ಷ ಮರೆಯುವ ಪ್ರಶ್ನೆಯೆ ಇಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅಶೋಕ್ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News