ಮುಂದಿನ ಆಯವ್ಯಯದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-09-03 12:16 GMT

ಬೆಂಗಳೂರು, ಸೆ.3 : ಮುಂಬರುವ ಆಯವ್ಯಯದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜಭವನದಲ್ಲಿ ಇಂದು ಆಯೋಜಿಸಿದ್ದ ಟೋಕಿಯೋ ಒಲಂಪಿಕ್ಸ್ 2020ರಲ್ಲಿ ಭಾಗವಹಿಸಿದ್ದ ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ರಾಜ್ಯಪಾಲರಾದ ಥಾವರ್ ಸಿಂಗ್ ಗೆಹ್ಲೋಟ್ ಅವರು ಟೋಕಿಯೋ ಒಲಂಪಿಕ್ಸ್ 2020 ರಲ್ಲಿ ಭಾಗವಹಿಸಿದ್ದ ರಾಜ್ಯದ ಕ್ರೀಡಾಪಟುಗಳಾದ ಕು.ಅದಿತಿ ಅಶೋಕ್(ಗಾಲ್ಫ್) ಶ್ರೀಹರಿ ನಟರಾಜ್(ಈಜು), ಶ್ರೀ ಫವಾಜ್ ಮಿರ್ಜಾ(ಈಕ್ವೆಸ್ಟ್ರಿಯನ್) ಹಾಗೂ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ಅಂಕಿತಾ.ಬಿ.ಎಸ್ ಅವರಿಗೆ ರಾಜಭವನದಲ್ಲಿ ಸನ್ಮಾನಿಸಿ ತಲಾ ಒಂದು ಲಕ್ಷ ರೂ.ಗಳ ಪ್ರೋತ್ಸಾಹ ಧನ ವಿತರಿಸಿರುವುದು ಉತ್ತಮ ನಡೆಯಾಗಿದೆ. ಇದು ಇಡೀ ಕ್ರೀಡಾ ಬಳಗಕ್ಕೆ ಸಂದ ಗೌರವ. ಸ್ವತ: ಕ್ರೀಡಾಪಟುಗಳಾಗಿರುವ ರಾಜ್ಯಪಾಲರ ಈ ನಡೆ ಸ್ವಾಗತಾರ್ಹ. ಇದು ಅವರಲ್ಲಿರುವ ಕ್ರೀಡಾ ಮನೋಭಾವ ಹಾಗೂ ಕ್ರೀಡಾಸ್ಪೂರ್ತಿಯನ್ನು ಬಿಂಬಿಸುತ್ತದೆ. ಪ್ರೋತ್ಸಾಹಧನ ನೀಡುವ ಮೂಲಕ ಕ್ರೀಡಾಪಟುಗಳು ಇನ್ನೂ ಉತ್ತಮ ಸಾಧನೆ ಮಾಡಲು ಪ್ರೇರಣೆಯಾಗಲಿದೆ ಎಂದು ತಿಳಿಸಿದರು.

ಒಲಂಪಿಕ್ಸ್ ಪ್ರತಿಷ್ಠಿತ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಕಠಿಣ ಪರಿಶ್ರಮ ಹಾಗೂ ಪೂರ್ವತಯಾರಿಯ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು  2024ರ ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಸಾಮರ್ಥ್ಯವುಳ್ಳ 75 ಕ್ರೀಡಾ ಪಟುಗಳಿಗೆ ತರಬೇತಿ, ಪ್ರೋತ್ಸಾಹ ನೀಡುವ ‘ಅಮೃತ ಕ್ರೀಡಾ ದತ್ತು ಯೋಜನೆ’ಯನ್ನು  ಘೋಷಣೆ ಮಾಡಲಾಗಿದೆ. ರಾಜ್ಯದ ಕ್ರೀಡಾ ಸಚಿವರು ಈಗಾಗಲೇ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ತರಬೇತಿ, ಪ್ರೋತ್ಸಾಹ ನೀಡಿ ರಾಜ್ಯದ ಕ್ರೀಡಾಪಟುಗಳು ಕಾಮನ್ವೆಲ್ತ್, ಏಷಿಯನ್ ಗೇಮ್ಸ್ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಲು ಸರ್ಕಾರ ಬೆಂಬಲವನ್ನು ನೀಡಲಿದೆ ಎಂದರು.

ರಾಜ್ಯ ಸರ್ಕಾರ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಿದೆ. ಗ್ರಾಮಗಳಲ್ಲಿ  ಹಾಗೂ ಎಲ್ಲ ಶಾಲೆಗಳಲ್ಲಿ ಕ್ರೀಡೆಗೆ ಉತ್ತೇಜನ ನೀಡಲಾಗುವುದು. ತಾಲ್ಲೂಕು ಮಟ್ಟದಲ್ಲಿ ಕ್ರೀಡಾ ಮೂಲಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿಯೂ ಅಂತರರಾಷ್ಟ್ರೀಯ ಮಟ್ಟದ ಆಧುನಿಕ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಹಾಗೂ ಜಿಲ್ಲೆಗಳಲ್ಲಿ ಈಗಾಗಲೇ ಇರುವ ಕ್ರೀಡಾಂಗಣಗಳನ್ನು ಉನ್ನತೀಕರಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News