ಬಿಜೆಪಿ ನಾಯಕರು ಭಾರತ ದೇಶದ ಹೆಸರು ಬದಲಾಯಿಸದಿದ್ದರೆ ಸಾಕು: ಮಾಜಿ ಸಚಿವ ಎಚ್.ಸಿ.ಮಹದೇವಪ್ಪ

Update: 2021-09-03 13:32 GMT

ಮೈಸೂರು,ಸೆ.3: 'ದೇಶದ ಮಹಾನ್ ನಾಯಕರ ಹೆಸರು ಬದಲಾಯಿಸುವ ಮನಸ್ಥಿತಿ ಹೊಂದಿರುವವರು ಸದ್ಯ ಭಾರತ ದೇಶದ ಹೆಸರನ್ನು ಬದಲಾಯಿಸದಿದ್ದರೆ ಸಾಕು' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾಯಿಸಬೇಕು ಎಂಬ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಹದೇವಪ್ಪ, ಸದ್ಯ ಭಾರತ ದೇಶದ ಹೆಸರು ಬದಲಾಗದಿದ್ದರೆ ಸಾಕು, ಈ ರೀತಿಯ ಹೆಸರುಗಳನ್ನು ಬದಲಾಯಿಸಬೇಕು ಎನ್ನುವವರ ಮನಸ್ಥಿತಿ ಏನು ಎಂದು ತೋರಿಸುತ್ತಿದೆ. ಹೆಸರು ಬದಲಾಯಿಸುವ ಬದಲು ಕಾಡಿನ ಸಂರಕ್ಷಣೆಗೆ ಒತ್ತು ನೀಡಿ, ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಲಿ, ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಅನುಕೂಲ ಮಾಡಿಕೊಡಲಿ ಎಂದು ಟಾಂಗ್ ನೀಡಿದರು.

ಮೈಸೂರು-ಬೆಂಗಳೂರು ದಶಪಥ ರಸ್ತೆ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಮಹದೇವಪ್ಪ, 'ನಾನು ಅಭಿವೃದ್ಧಿ ಪಡಿಸಿರುವುದು ಎಂದು ಎಂದೂ ಹೇಳಿಲ್ಲ, ಆದರೆ ನನ್ನ ಅಭಿವೃದ್ಧಿ ಕೆಲಸಗಳು ಹೇಳುತ್ತಿವೆ. ನವಿಲು ಯಾವುದೂ ಗೆಂಬೂತ ಯಾವುದೂ ಅಂತ ಜನರಿಗೆ ಗೊತ್ತಿದೆ' ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.

'ನಾನು ಸೋತರು ನಾನು ಮಾಡಿರುವ ರಸ್ತೆ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಹುಬ್ಬಳ್ಳಿಯಲ್ಲಿ ಸನ್ಮಾನ ಮಾಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು' ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮಂಜುಳಾ ಮಾನಸ, ಎಚ್.ಎ.ವೆಂಕಟೇಶ್, ಕಾಂಗ್ರೆಸ್ ಮುಖಂಡರುಗಳಾದ ಶಿವಣ್ಣ, ಹರೀಶ್ ಗೌಡ, ಹೆಡತಲೆ ಮಂಜುನಾಥ್, ಶಿವಪ್ರಸಾದ್, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News