ಬ್ಯಾಗ್ ಖರೀದಿಯಲ್ಲಿ ಅಕ್ರಮ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಆರೋಪ

Update: 2021-09-03 13:56 GMT
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಾ.ರಾ.ಮಹೇಶ್

ಮೈಸೂರು,ಸೆ.3: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ 8 ರೂ. ಬೆಲೆ ಬಾಳುವ ಬಟ್ಟೆ ಬ್ಯಾಗ್‍ಗೆ 52 ರೂಪಾಯಿ ಕೊಟ್ಟು ಖರೀದಿಸಿ ಅಕ್ರಮ ಎಸಗಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪ ಮಾಡಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದ ಬಟ್ಟೆ ಬ್ಯಾಗ್ ಮೇಲೆ ಪ್ರಿಂಟ್ ಹಾಕಲು 42 ರೂ. ಬೇಕಾ? ಒಟ್ಟು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಈ ಬ್ಯಾಗ್ ಖರೀದಿಯಲ್ಲಿ 6.18 ಕೋಟಿ ರೂ. ಅಕ್ರಮ ನಡೆದಿದೆ.ವಾಸ್ತವವಾಗಿ ಖರೀದಿಗೆ 1.47 ಕೋಟಿ ರೂ. ಆಗುತ್ತಿತ್ತು ಎಂದು ಅಂಕಿ ಅಂಶಗಳನ್ನು ಮುಂದಿಟ್ಟು ರೋಹಿಣಿ ಸಿಂಧೂರಿ ವಿರುದ್ಧ ಆರೋಪಿಸಿದರು.

ದಾಖಲೆಗಳ ಸಮೇತ ಆರೋಪ ಮಾಡುತ್ತಿದ್ದೇನೆ. ಈ ಹಣವನ್ನು ಅವರಿಂದಲೇ ವಸೂಲಿ ಮಾಡಬೇಕು. ಕ್ರಮ ಕೈಗೊಳ್ಳದಿದ್ದರೆ ಮುಖ್ಯ ಕಾರ್ಯದರ್ಶಿಗಳ ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆ, ಪುರಸಭೆಗೆ ಇವರೇ ಬ್ಯಾಗ್ ಸರಬರಾಜು ಟೆಂಡರ್ ಗೆ ಅನುಮೋದನೆ ನೀಡಿದ್ದರು. ನಗರಸಭೆ, ಪುರಸಭೆ ಮೇಲೆ ಇವರಿಗೆ ಅಷ್ಟೊಂದು ಆಸಕ್ತಿ ಯಾಕೆ ಇತ್ತು ಎಂದು ಪ್ರಶ್ನಿಸಿದರು.

ಅವರಿಗೆ ಸರ್ಕಾರಿ ಕೆಲಸ ಮಾಡುವಲ್ಲಿ ದಕ್ಷತೆ ಇಲ್ಲ. ಅಪ್ರಮಾಣಿಕ ಅಧಿಕಾರಿ ನೇಮಕಕ್ಕೆ ವಿರೋಧ ಮಾಡಿದ್ದೆ. ನಾನು ಎಂಟು ಆರೋಪ ಮಾಡಿದ್ದೆ. ಅದರಲ್ಲಿ ಅವರ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ ಎಂದ ಅವರು ಅವರನ್ನು ಅಮಾನತು ಮಾಡಿ, ಲೋಪ ಆಗಿರುವ ಹಣವನ್ನು ಅವರಿಂದಲೇ ವಸೂಲಿ ಆಗಬೇಕು ಎಂದು ಮುಖ್ಯಮಂತ್ರಿ ಹಾಗೂ ಸರ್ಕಾರದ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News