ಅಲ್ಪ ಅವಧಿಯಲ್ಲಿ ಸರಕಾರದ ಮೌಲ್ಯಮಾಪನ ನಿರ್ಧರಿಸಲು ಸಾಧ್ಯವಿಲ್ಲ: ಜಗದೀಶ್ ಶೆಟ್ಟರ್

Update: 2021-09-03 13:53 GMT

ಹುಬ್ಬಳ್ಳಿ, ಸೆ.3: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಕೇವಲ ಒಂದು ತಿಂಗಳು ಆಗಿದೆ. ಈ ಅಲ್ಪ ಅವಧಿಯಲ್ಲಿ ಅವರ ನೇತೃತ್ವದ ಸರಕಾರದಆಡಳಿತದ ಕುರಿತು ಮೌಲ್ಯಮಾಪನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು.

ಶುಕ್ರವಾರ ನಗರದ ವಿನಾಯಕ ಕಾಲನಿಯಲ್ಲಿರುವ ದೇವಕಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಪ್ರಯುಕ್ತ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಸವರಾಜ ಬೊಮ್ಮಾಯಿ ಸರಕಾರವನ್ನು ಮುನ್ನಡೆಸುವಲ್ಲಿ ಪಾಸೋ, ಫೇಲೋ ಅನ್ನೋದನ್ನು ಕೇವಲ ಒಂದು ತಿಂಗಳ ಅವರ ಆಡಳಿತಾವಧಿಯನ್ನು ಮುಂದಿಟ್ಟುಕೊಂಡು ಯಾವ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಇದೇ ವೇಳೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಇನ್ನೂ ತುಂಬಾ ದೂರವಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ ಎಂದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವು ಪಾಲಿಕೆ ಚುನಾವಣೆಯಲ್ಲಿ ಯಾವುದೆ ಪರಿಣಾಮ ಬೀರುವುದಿಲ್ಲ. ಬೆಲೆ ಏರಿಕೆ ಕಾಲಕಾಲಕ್ಕೆ ಆಗುತ್ತಿರುತ್ತದೆ. ಅಭಿವೃದ್ಧಿ ವಿಚಾರವಷ್ಟೇ ಇಲ್ಲಿ ಮುಖ್ಯವಾಗುತ್ತದೆ. ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಚರ್ಚೆ ಅನಗತ್ಯ

ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿರುವುದಾಗಿ ಅಮಿತ್ ಶಾ ಅವರೇ ಹೇಳಿಕೆ ನೀಡಿದ್ದಾರೆ. ಆದುದರಿಂದ, ಈ ವಿಷಯದಲ್ಲಿ ಹೆಚ್ಚಿನ ಚರ್ಚೆ ಅನಗತ್ಯ.
-ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News