ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಆರೋಪಿ ಅರ್ಜುನ್ ಸಿಐಡಿ ಕಸ್ಟಡಿಗೆ
ಚಿಕ್ಕಮಗಳೂರು, ಸೆ.3: ಜಿಲ್ಲೆಯ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಸೈ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದಲ್ಲಿ ಸಿಐಡಿಯಿಂದ ಬಂಧನಕ್ಕೊಳಗಾಗಿದ್ದ ಆರೋಪಿ ಅರ್ಜುನ್ ಅವರನ್ನು ಗುರುವಾರ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದ ನ್ಯಾಯಾಲಯ ಶುಕ್ರವಾರ ಆರೋಪಿಯನ್ನು 1 ದಿನದ ಮಟ್ಟಿಗೆ ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.
ಸದ್ಯ ಅಮಾನತಾಗಿರುವ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣೆಯ ಪಿಎಸ್ಸೈ ಅರ್ಜುನ್ ಅವರು ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಎಂಬಾತನನ್ನು ಪ್ರಕರಣವೊಂದರ ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿಕೊಂಡಿದ್ದು, ಈ ವೇಳೆ ಅವರು ಪುನೀತ್‍ನನ್ನು ತಲೆಕೆಳಗೆ ಮಾಡಿ ನೇತು ಹಾಕಿದ್ದಲ್ಲದೇ ಮೂತ್ರ ಕಡಿಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಪ್ರಕಣರಣದಲ್ಲಿ ಅಮಾನಾತುಗೊಂಡಿದ್ದ ಆರೋಪಿ ಅರ್ಜುನ್ ವಿರುದ್ಧ ಎಫ್‍ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು. ಈ ಮಧ್ಯೆ ಸರಕಾರ ಪ್ರಕರಣವನ್ನು ಸಿಐಡಿ ತನಿಗೆ ಒಪ್ಪಿಸಿದ್ದು, ಸಿಐಡಿ ಅಧಿಕಾರಿಗಳ ತಂಡ ತನಿಖೆ ಕೈಗೆತ್ತಿಕೊಂಡ ಬಳಿಕ ಅರ್ಜುನ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್‍ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಕಳೆದ ಬುಧವಾರ ಸಿಐಡಿ ಅಧಿಕಾರಿಗಳು ಆರೋಪಿ ಅರ್ಜುನ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಗುರುವಾರ ಚಿಕ್ಕಮಗಳೂರು ನಗರದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಗುರುವಾರ ನ್ಯಾಯಾಲಯ ಆದೇಶ ನೀಡಿತ್ತು. ಸಿಐಡಿ ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ಉದ್ದೇಶದಿಂದ ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸಲು ಕೋರಿದ್ದರಿಂದ ಶುಕ್ರವಾರ ಈ ಸಂಬಂಧ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಯನ್ನು 1 ದಿನದ ಮಟ್ಟಿಗೆ ಸಿಐಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.