ಪೆಟ್ರೋಲ್, ಡೀಸೆಲ್ ಬೆಲೆ ಏರಿಳಿತ ಸಹಜ: ಸಚಿವ ನಾರಾಯಣಗೌಡ
ಬೆಂಗಳೂರು, ಸೆ. 3: `ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಏಕೆ ಹೆಚ್ಚಾಗಿದೆ ಎಂದು ಎಲ್ಲರಿಗೂ ಗೊತ್ತು. ತೈಲೋತ್ಪನ್ನಗಳ ಬೆಲೆಯಲ್ಲಿ ಏರಿಳಿತ ಸಹಜ. ಆದರೆ, ಈ ವಿಚಾರದಲ್ಲಿ ರಾಜಕಾರಣ ನಡೆಯುತ್ತಿದೆ. ನಿಜವಾಗಿಯೂ ಅಡುಗೆ ಅನಿಲ ಬಳಕೆದಾರರು ಯಾರೂ ಬೀದಿಗೆ ಬಂದಿಲ್ಲ, ಬೀದಿಗೆ ಬಂದಿರುವವರು ರಾಜಕಾರಣಿಗಳು ಮಾತ್ರ' ಎಂದು ಕ್ರೀಡಾ ಸಚಿವ ನಾರಾಯಣಗೌಡ ಯಾವುದೇ ಅಳುಕಿಲ್ಲದೆ ಬೆಲೆ ಏರಿಕೆಯನ್ನು ಸಮರ್ಥಿಸಿದ್ದಾರೆ.
ಶುಕ್ರವಾರ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, `ಬೆಲೆ ಏರಿಕೆ ವಿಚಾರದ ಪ್ರತಿಭಟನೆಯ ನಾಟಕ ನಡೆಯುತ್ತಿದೆ. ನಿಜವಾದ ಸಮಸ್ಯೆ ಯಾರಿಗೂ ಆಗಿಲ್ಲ, ಇದು ರಾಜಕಾರಣದ ಪಿತೂರಿ. ಕಾಂಗ್ರೆಸ್ ಸರಕಾರ ಇರುವಾಗ ಬೆಲೆ ಏರಿಕೆ ಆಗಿರಲಿಲ್ಲವೇ? ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ' ಎಂದು ಉಡಾಫೆಯಾಗಿ ಪ್ರತಿಕ್ರಿಯಿಸಿದರು.
`ಮನೆ ಮನೆಗೆ ಅಡುಗೆ ಅನಿಲ ಸಂಪರ್ಕ ನೀಡಿದವರು ಯಾರು? ಹೆಣ್ಣು ಮಕ್ಕಳಿಗೆ ತೊಂದರೆ ಅಗಬಾರದು ಎಂದು ಉಚಿತವಾಗಿ ಕೊಟ್ಟಿರೋದು ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ. ಇಂಧನ ಬೆಲೆ ಏರಿಳಿತ ಇರುತ್ತದೆ. ಸಮಸ್ಯೆ ಬಗೆಹರಿಸಲು ಪ್ರಧಾನಿ ಸನ್ನದ್ಧವಾಗುತ್ತಿದ್ದಾರೆ. ಕಾಂಗ್ರೆಸ್ ಅವರಿಂದ ಹೇಳಿಸಿಕೊಳ್ಳಬೇಕಾಗಿಲ್ಲ. ಬೆಲೆ ಏರಿಕೆ ಕೇವಲ ತಾತ್ಕಾಲಿಕ ಅಷ್ಟೇ. ಶಾಸಕರದ್ದು, ಸಚಿವರದ್ದು ವೇತನ ಹೆಚ್ಚಳ ಆಗಿಲ್ಲ, ನಾವೂ ಕೇಳಿಲ್ಲ. ಶಾಸಕರಿಗೂ ಡೀಸೆಲ್, ಪೆಟ್ರೋಲ್ ಖರ್ಚು ಇರುತ್ತದೆ' ಎಂದು ನಾರಾಯಣಗೌಡ ತಮ್ಮದೆ ದಾಟಿಯಲ್ಲಿ ಹೇಳಿದರು.