ವಿದ್ಯಾರ್ಥಿಗಳ ವಿಚಾರಣೆ ನಡೆಸಿರುವುದು ನಿಯಮಗಳಿಗೆ ವಿರುದ್ಧ ಎಂದು ಒಪ್ಪಿಕೊಂಡ ಪೊಲೀಸ್: ವರದಿ

Update: 2021-09-03 15:06 GMT
File Photo

ಬೀದರ್: ಶಾಲೆಯಲ್ಲಿ ನಡೆದ ನಾಟಕದ ನಂತರ ದೇಶದ್ರೋಹದ ಆರೋಪದ ಮೇಲೆ ಶಾಹೀನ್ ಶಾಲೆಯ ವಿದ್ಯಾರ್ಥಿಯ ತಾಯಿ ಹಾಗೂ ಶಿಕ್ಷಕಿ ಎರಡು ವಾರಗಳ ಕಾಲ ಜೈಲುವಾಸ ಅನುಭವಿಸಿದ್ದರು. ಈ ಘಟನೆ ನಡೆದು 18 ತಿಂಗಳಿಗಿಂತ ಹೆಚ್ಚು ಸಮಯದ ನಂತರ ಕರ್ನಾಟಕ ಪೊಲೀಸರು ತಮ್ಮ ಅಧಿಕಾರಿಗಳು ಶಾಲೆಯಲ್ಲಿ ಹಲವು ಬಾರಿ ವಿದ್ಯಾರ್ಥಿಗಳನ್ನು ಪ್ರಶ್ನಿಸಿ ತಪ್ಪು ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು  thenewsminute.com ವರದಿ ಮಾಡಿದೆ.

ಫೆಬ್ರವರಿ 2020 ರಲ್ಲಿ ವಿದ್ಯಾರ್ಥಿಗಳನ್ನು ಪ್ರಶ್ನಿಸುವಾಗ ಅಧಿಕಾರಿಗಳು ಶಸ್ತ್ರಸಜ್ಜಿತರಾಗಿ ಸಮವಸ್ತ್ರದಲ್ಲಿದ್ದರು ಹಾಗೂ ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ  ಬೀದರ್ ಜಿಲ್ಲೆಯ ಹಾಲಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್. ಹೇಳಿದ್ದಾರೆ. 

ಆಗಸ್ಟ್ 31, 2021 ರಂದು ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರಿಗೆ (ಡಿಜಿ-ಐಜಿಪಿ) ನೀಡಿದ ವರದಿಯಲ್ಲಿ ಪ್ರಕರಣದ ಪೊಲೀಸ್ ತನಿಖಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ನಾನು ಶಿಫಾರಸು ಮಾಡಿದ್ದೇನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. 

ತನಿಖಾಧಿಕಾರಿ(ಅಂದಿನ ಉಪ ಪೊಲೀಸ್ ಅಧೀಕ್ಷಕ) ಬಸವೇಶ್ವರ ಹೀರಾ ಸಮವಸ್ತ್ರದಲ್ಲಿರದಿದ್ದರೂ, ವಿದ್ಯಾರ್ಥಿಗಳೊಂದಿಗೆ ವಿಚಾರಣೆಯ ಸಮಯದಲ್ಲಿ ಮಾತನಾಡುತ್ತಿದ್ದಾಗ ಅವರ ಅಧೀನ ಅಧಿಕಾರಿಗಳು ಸಮವಸ್ತ್ರ ಧರಿಸಿ ಶಸ್ತ್ರಸಜ್ಜಿತರಾಗಿದ್ದರು. ಹೀಗಾಗಿ ಬಾಲ ನ್ಯಾಯ ಮಾದರಿ ನಿಯಮಗಳು 2016ರ  86 (5) ಅನ್ನು ಉಲ್ಲಂಘಿಸಿದ್ದಾರೆ ಎಂದು  ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

ಶಾಲಾ ಮಕ್ಕಳ ವಿಚಾರಣೆಗಾಗಿ ಕರ್ನಾಟಕ ಹೈಕೋರ್ಟ್ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಎರಡು ವಾರಗಳ ನಂತರ ಅಫಿಡವಿಟ್ ಸಲ್ಲಿಸಲಾಗಿದೆ. 2021ರ ಆಗಸ್ಟ್ ನಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಹಾಗೂ ಜಸ್ಟಿಸ್ ಎನ್. ಎಸ್. ಸಂಜಯ್ ಗೌಡ ಅವರನ್ನೊಳಗೊಂಡ ಕರ್ನಾಟಕ ಹೈಕೋರ್ಟ್ ಪೀಠ ನಯನಾ ಜ್ಯೋತಿ ಝಾವರ್ ಹಾಗೂ ಮಾನವ ಹಕ್ಕುಗಳ ಶಿಕ್ಷಣ ಹಾಗೂ ಮೇಲ್ವಿಚಾರಣೆಗಾಗಿನ ದಕ್ಷಿಣ ಭಾರತ ಸೆಲ್ ಸಲ್ಲಿಸಿರುವ ಅರ್ಜಿಯನ್ನು ಆಲಿಸುವಾಗ, ಪೊಲೀಸರ ಕ್ರಮವು ಬಾಲ ನ್ಯಾಯ ಕಾಯ್ದೆ ಅಡಿ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು.

2020ರ ಜನವರಿ 26ರಂದು ಸಂಘಪರಿವಾರದ ಕಾರ್ಯಕರ್ತನೋರ್ವ ನೀಡಿದ ದೂರನ್ನು ಆಧರಿಸಿ ಅಂದಿನ ಬೀದರ್ ಜಿಲ್ಲೆಯ ಡಿಎಸ್ಪಿ ಬಸವೇಶ್ವರ ಹೀರಾ ನೇತೃತ್ವದ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಯ ತಾಯಿ ಹಾಗೂ ಶಾಲೆಯ ಶಿಕ್ಷಕಿಯನ್ನು ಬಂಧಿಸಿದ್ದರು. 

ನಾಟಕದಲ್ಲಿದ್ದ ವಿದ್ಯಾರ್ಥಿಗಳನ್ನು ಪ್ರಶ್ನಿಸಲು ಬಸವೇಶ್ವರ ನೇತೃತ್ವದ ಪೊಲೀಸ್ ಅಧಿಕಾರಿಗಳು ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಐದು ಬಾರಿ ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News