×
Ad

ಮೂರು ಮಹಾನಗರ ಪಾಲಿಕೆ ಚುನಾವಣೆಗೆ ಶಾಂತಿಯುತ ಮತದಾನ: ಸೆ.6ರಂದು ನಡೆಯಲಿರುವ ಮತ ಎಣಿಕೆಯತ್ತ ಎಲ್ಲರ ಚಿತ್ತ

Update: 2021-09-03 21:21 IST

ಬೆಂಗಳೂರು, ಸೆ. 3: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿದ್ದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಚುನಾವಣೆ ಕೆಲ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತ ಅಂತ್ಯ ಕಂಡಿದ್ದು, ಸೆ.6ರಂದು ನಡೆಯಲಿರುವ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಬೆಳಗಾವಿ 50.41, ಹುಬ್ಬಳ್ಳಿ- ಧಾರವಾಡ 53.81 ಹಾಗೂ ಕಲಬುರಗಿ 49.40ರಷ್ಷು ಮತದಾನ ಆಗಿದೆ. ಬೆಳಗಾವಿ-58, ಹುಬ್ಬಳ್ಳಿ-ಧಾರವಾಡ-82 ಹಾಗೂ ಕಲಬುರಗಿ-55 ವಾರ್ಡ್‍ಗಳಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಹಿತ ಪಕ್ಷೇತರರು ಸೇರಿದಂತೆ ಒಟ್ಟು 1,105 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆದಿದ್ದು, ಘಟಾನುಘಟಿಗಳ ಹಣೆಬರಹ ಇವಿಎಂನಲ್ಲಿ ಭದ್ರವಾಗಿದೆ. ಮೂರು ಮಹಾನಗರ ಪಾಲಿಕೆ ಚುನಾವಣಾ ಮತದಾನ ಬೆಳಗ್ಗೆ 7ಗಂಟೆಯಿಂದಲೇ ಆರಂಭವಾದರೂ ಮಧ್ಯಾಹ್ನದ ನಂತರ ಕೊಂಚ ಬಿರುಸು ಪಡೆದುಕೊಂಡಿದ್ದು, ಎಲ್ಲ ಕಡೆಗಳಲ್ಲಿ ಜನರು ಸರತಿ ಸಾಲಲ್ಲಿ ನಿಂತು ಹಕ್ಕು ಚಲಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಕೋವಿಡ್ ಸೋಂಕಿನ ಆತಂಕದ ನಡುವೆಯೇ ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ಮೇಲುಗೈ ಸಾಧಿಸಲು ಹರಸಾಹಸ ನಡೆಸಿವೆ. ಮೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಮತಗಟ್ಟೆಗಳಲ್ಲಿ ಕೋವಿಡ್ ಮುನ್ನಚ್ಚರಿಕೆ ಕೈಗೊಳ್ಳಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸೆ.6ರಂದು ಆಯಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News