×
Ad

ರಮೇಶ್ ಜಾರಕಿಹೊಳಿ ಅಶ್ಲೀಲ ಸೀಡಿ ಪ್ರಕರಣ: ವರದಿ ಸಲ್ಲಿಸಲು ಎಸ್ ಐಟಿಗೆ ಅನುಮತಿ ನೀಡುವಂತೆ ಹೈಕೋರ್ಟ್ ಗೆ ಮನವಿ

Update: 2021-09-03 21:57 IST

ಬೆಂಗಳೂರು, ಆ.15: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ  ಅಶ್ಲೀಲ  ಸೀಡಿ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ವರದಿಯನ್ನು ವಿಚಾರಣಾ ಕೋರ್ಟ್ ಸಲ್ಲಿಸಲು ಎಸ್‌ಐಟಿಗೆ ಅನುಮತಿ ನೀಡುವಂತೆ ರಾಜ್ಯ ಸರಕಾರ ಹೈಕೋರ್ಟ್ ಗೆ ಮನವಿ ಮಾಡಿದೆ.

ರಮೇಶ್ ಜಾರಕಿಹೊಳಿ ಸೀಡಿ  ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಮತ್ತು ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್ ವಹಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ವಕೀಲರು, ಎಸ್‌ಐಟಿ ಮುಖ್ಯಸ್ಥರಾಗಿದ್ದ ಸೌಮೇಂದು ಮುಖರ್ಜಿ ವೈದ್ಯಕೀಯ ರಜೆ ಮೇಲೆ ತೆರಳಿದ್ದರು. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್‌ಗೆ ತನಿಖೆಯ ಉಸ್ತುವಾರಿ ವಹಿಸಲಾಗಿತ್ತು. ಈಗಾಗಲೇ ಎಸ್‌ಐಟಿ ತನಿಖೆಯ ಪೂರ್ಣಗೊಂಡು ಅಂತಿಮ ವರದಿ ಸಿದ್ಧವಾಗಿದೆ. ಹೈಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿರುವುದರಿಂದ ಇನ್ನೂ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ತನಿಖೆಯ ಅಂತಿಮ ವರದಿ ಸಲ್ಲಿಸಿಲ್ಲ ಎಂದು ತಿಳಿಸಿದರು.

ಅಲ್ಲದೆ, ತನಿಖೆಯ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದರೆ ಆಗ ಮೂರು ಆಯ್ಕೆ ಇರುತ್ತದೆ. ವರದಿಯನ್ನು ಯಥಾವತ್ತಾಗಿ ಸ್ವೀಕರಿಸುವುದು. ವರದಿ ಸಮರ್ಪಕವಾಗಿರದಿದ್ದರೆ ಮರು ತನಿಖೆ ಅಥವಾ ಹೆಚ್ಚುವರಿ ತನಿಖೆಗೆ ಆದೇಶಿಸಬಹುದು. ಇಲ್ಲವೇ ನೇರವಾಗಿ ಕಾಗ್ನಿಜೆನ್ಸ್ ತೆಗೆದುಕೊಳ್ಳಬಹುದು. ಈ ಪ್ರಕರಣದಲ್ಲೂ ಅಂತಿಮ ವರದಿ ಸಲ್ಲಿಸುವ ಹಂತದಲ್ಲಿದೆ ಎಂದು ತಿಳಿಸಿರು.

ಆದರೆ, ವಿಚಾರಣಾ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸುವುದಕ್ಕೆ ಹೈಕೋರ್ಟ್‌ನ ನಿರ್ಬಂಧವಿದೆ. ಎಸ್‌ಐಟಿಯು ಕಾಲ ಕಾಲಕ್ಕೆ ತನಿಖೆಯ ಪ್ರಗತಿ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಅಂತಿಮ ವರದಿಯನ್ನೂ ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿದೆ. ಆ ಎಲ್ಲಾವನ್ನೂ ನ್ಯಾಯಾಲಯ ಪರಿಶೀಲಿಸಿದೆ. ವರದಿಯನ್ನು ಸಲ್ಲಿಸದ ನಂತರವೂ ಹೈಕೋರ್ಟ್, ಮೇಲ್ವಿಚಾರಣೆ ನಡೆಸಬಹುದಾಗಿದೆ. ಹೀಗಾಗಿ, ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಎಸ್‌ಐಟಿಗೆ ಅನುಮತಿ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News