ಇಲಾಖಾ ತನಿಖೆ ನಡೆಸಲು ಡಿಜಿಪಿಗೆ ಶಿಫಾರಸು ಮಾಡಲಾಗಿದೆ: ಹೈಕೋರ್ಟ್ ಗೆ ಹೇಳಿಕೆ

Update: 2021-09-03 17:10 GMT

ಬೆಂಗಳೂರು, ಸೆ.3: ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಾಟಕ ಪ್ರದರ್ಶಿಸಿದ್ದಕ್ಕೆ ದೇಶದ್ರೋಹ ಆರೋಪದ ಮೇರೆಗೆ ಬೀದರ್‌ನ ಶಾಹಿನ್ ಶಿಕ್ಷಣ ಸಂಸ್ಥೆಯ ಮಕ್ಕಳನ್ನು ಸಮವಸ್ತ್ರ, ಶಸ್ತ್ರಾಸ್ತ್ರ ಹೊಂದಿದ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆನ್ನುವ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಇಲಾಖಾ ತನಿಖೆ ನಡೆಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಶಿಫಾರಸು ಮಾಡಿದ್ದಾರೆ ಎಂದು ರಾಜ್ಯ ಸರಕಾರ ಹೈಕೋರ್ಟ್ ಗೆ ಹೇಳಿದೆ.

ವಕೀಲೆ ನಯನ ಜ್ಯೋತಿ ಝಾವರ್ ಹಾಗೂ ಮಾನವ ಹಕ್ಕುಗಳ ಸಂಘಟನೆ  ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ಆಗ ಸರಕಾರಿ ವಕೀಲರಾದ ವಿಜಯಕುಮಾರ್ ಪಾಟೀಲ್, ಮೇಲ್ನೋಟಕ್ಕೆ ಪ್ರಕರಣದಲ್ಲಿ ಬಾಲ ನ್ಯಾಯ ಕಾಯಿದೆ ನಿಯಮ 86 ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಇದರಲ್ಲಿ ತನಿಖಾಕಾರಿಗಳ ಲೋಪವಿಲ್ಲ, ಆದರೆ ಅವರ ಜೊತೆ ಸಿಬ್ಬಂದಿಯಿಂದ ಲೋಪವಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸುವಂತೆ ಎಸ್ ಪಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಶಿಫಾರಸು ಮಾಡಿದ್ದಾರೆ. ಆ ಕುರಿತು ಎಸ್ ಪಿ ಪ್ರಮಾಣಪತ್ರ ಸಲ್ಲಿಸಿದ್ದಾರೆಂದರು.

ಆಗ ನ್ಯಾಯಪೀಠ, ಆ.16ರ ಆದೇಶವನ್ನು ಸರಕಾರ ಪಾಲಿಸಿದೆ ಎಂದು ದಾಖಲಿಸಿಕೊಳ್ಳಲು ಮುಂದಾಯಿತು.
ಆಗ ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ‘‘ಹಿಂದಿನ ಆದೇಶದಲ್ಲಿ ಎರಡು ನಿರ್ದೇಶನಗಳಿದ್ದವು, ಒಂದು ಘಟನಗೆ ಬಗ್ಗೆ ತನಿಖೆ ಸ್ಥಿತಿಗತಿ ವರದಿ ಸಲ್ಲಿಸುವುದು. ಇನ್ನೊಂದು ಇನ್ನು ಮುಂದೆ ರಾಜ್ಯದಲ್ಲಿ ಬಾಲ ನ್ಯಾಯ ಕಾಯಿದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಕುರಿತು ಡಿಜಿಪಿ ಎಲ್ಲ ಪೊಲೀಸ್ ಅಕಾರಿಗಳಿಗೆ ನಿರ್ದೇಶನ ನೀಡುವಂತೆ ಆದೇಶಿಸಲಾಗಿತ್ತು. ಅದು ಪಾಲನೆಯಾಗಿಲ್ಲ’’ಎಂದರು.

ಅದಕ್ಕೆ ಸರಕಾರಿ ವಕೀಲರು ಉತ್ತರಿಸಿ, ಎರಡನೇ ಆದೇಶವನ್ನೂ ಸಹ ಪಾಲನೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಆಗ ನ್ಯಾಯಪೀಠ ಸರಕಾರಿ ವಕೀಲರ ಹೇಳಿಕೆಯನ್ನು ದಾಖಲಿಸಿಕೊಂಡು, ವಿಚಾರಣೆಯನ್ನು ಅ.21ಕ್ಕೆ ಮುಂದೂಡಿ ಅಷ್ಟರಲ್ಲಿ ಇಲಾಖಾ ತನಿಖೆಯ ಸ್ಥಿತಿಗತಿಯ ವಿವರವನ್ನು ಸಲ್ಲಿಸುವಂತೆ ಸೂಚನೆ ನೀಡಿತು.

ಬೀದರ್‌ನ ಶಹಾಪುರಗೇಟ್‌ನ ಶಾಹಿನ್ ಪ್ರಾಥಮಿಕ ಶಾಲೆಯಲ್ಲಿ 2020ರ ಜ.21ರಂದು ನಡೆದ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಕ್ಕಳ ನಾಟಕ ಪ್ರದರ್ಶಿಸಿದ್ದರು. ಅದರಲ್ಲಿ  ಪ್ರಧಾನಿ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಲಾಗಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು   ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.  ಈ ಸಂಬಂಧ ಪೊಲೀಸರು ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದರು. ಆ ವೇಳೆ  ಪೊಲೀಸ್ ಕೈಪಿಡಿ ಹಾಗೂ ಬಾಲ ನ್ಯಾಯ ಕಾಯಿದೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗಸೂಚಿಗಳನ್ನು  ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News