ಶಿವಮೊಗ್ಗ: ಶಾಸಕ ಸ್ಥಾನದಿಂದ ಸಿ.ಟಿ. ರವಿಯನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯ
ಶಿವಮೊಗ್ಗ,ಸೆ.03: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮದರಸಾಗಳ ಬಗ್ಗೆ ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಪ್ರತಿಭಟನೆ ನಡೆಸಿ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಸಿ.ಟಿ. ರವಿ ಮದರಸಾಗಳ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಠಿಯಾಗುತ್ತಾರೆ ಎಂದು ಹೇಳುವ ಮೂಲಕ ಶಾಂತಿ ಕದಡಿದ್ದಾರೆ. ಇದನ್ನು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ತೀವ್ರವಾಗಿ ಖಂಡಿಸುತ್ತದೆ. ಮಾತೆತ್ತಿದರೆ ದರ್ಗಾ, ಮಂದಿರ, ಮಸೀದಿ, ಮದರಸಾ ಈ ಬಗ್ಗೆ ವಿಚಿತ್ರವಾಗಿ ಮಾತನಾಡಿ ಕೋಮುಗಲಭೆ ಸೃಷ್ಠಿಸುವ ಹುನ್ನಾರವನ್ನು ಸಿ.ಟಿ. ರವಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮದರಸಾಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎಂಬ ಇತಿಹಾಸವನ್ನು ಸಿ.ಟಿ. ರವಿ ಮರೆತಿದ್ದಾರೆ. ಆರ್.ಎಸ್.ಎಸ್. ಕಚೇರಿಗಳಲ್ಲಿ ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿಯವರೆಗೆ ಭಾರತದ ಧ್ವಜವನ್ನು ಧ್ವಜಾರೋಹಣ ಮಾಡಿಲ್ಲ. ಇಂತಹ ನಕಲಿ ದೇಶಭಕ್ತರು ಮದರಸಾಗಳ ಬಗ್ಗೆ ಮಾತನಾಡಿ, ಸಮಾಜದಲ್ಲಿ ಶಾಂತಿಭಂಗ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಸಿ.ಟಿ. ರವಿ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೊಹಮ್ಮದ್ ಆರೀಫ್ ವುಲ್ಲಾ, ಪ್ರಮುಖರಾದ ಮೊಹಮ್ಮದ್ ನಿಹಾಲ್, ಇಕ್ಬಾಲ್ ನೇತಾಜಿ, ರೆಹಮತ್ ವುಲ್ಲಾ, ಸೈಯದ್ ವಾಹಿದ್ ಅಡ್ಡು, ಮೊಹಮ್ಮದ್ ಹುಸೇನ್, ಮಜರ್ ಇರ್ಫಾನ್ ಖಾನ್, ಅಬ್ದಲ್, ಆಸೀಫ್ ಮಸೂದ್, ಅಹಮದ್ ಬೇಗ್ ಸೇರಿದಂತೆ ಹಲವರಿದ್ದರು.