ವಿಶೇಷ ಕ್ರಿಡಾ ತರಬೇತಿ ಕೇಂದ್ರಕ್ಕೆ ವಿರೋಧ: ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟ ವೇದಿಕೆಯಿಂದ ಪ್ರತಿಭಟನೆ

Update: 2021-09-03 17:04 GMT

ಶಿವಮೊಗ್ಗ,ಸೆ.3: ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ಆವರಣದಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಿತ ವಿಶೇಷ ಕ್ರಿಡಾ ತರಬೇತಿ ಕೇಂದ್ರ(ಎಸ್.ಟಿ.ಸಿ) ನಿರ್ಮಿಸುವುದನ್ನು ವಿರೋಧಿಸಿ ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟ ವೇದಿಕೆ ವತಿಯಿಂದ ನಗರದ ಎಂ.ಆರ್.ಎಸ್. ವೃತ್ತದಲ್ಲಿ ಎರಡು ಗಂಟೆ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಸಾಯಿ ಇಂಡಿಯಾ ಸಂಸ್ಥೆಯಿಂ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಯಾಗುತ್ತಿರುವುದಕ್ಕೆ ಸ್ವಾಗತವಿದೆ. ಆದರೆ, ಇದು ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ಮಾತ್ರ ಸ್ಥಾಪನೆಯಾಗಬಾರದು. ಇದರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಸಹ್ಯಾದ್ರಿ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿ ಇನ್ನೂ ಹೊಸ ಕಾಲೇಜು ಕಟ್ಟಡಗಳು ಆರಂಭವಾಗಬೇಕಿದೆ. ಹಾಸ್ಟೆಲ್ ಗಳು, ಲೈಬ್ರರಿ, ಪ್ರಯೋಗಾಲಯ ಆಗಬೇಕಿದೆ. ಇದಕ್ಕೆ ಜಾಗ ಸಾಲದು. ಈಗ ಮತ್ತೆ ಕ್ರೀಡಾ ತರಬೇತಿ ಕೇಂದ್ರವಾದರೆ ಸಹ್ಯಾದ್ರಿ ಕಾಲೇಜಿನ ಸಾಂಸ್ಕೃತಿಕ ವಾತಾವರಣವೇ ಹದಗೆಡಲಿದೆ. ಖೇಲೋ ಇಂಡಿಯಾ ಯೋಜನೆಗಾಗಿ ಸಹ್ಯಾದ್ರಿ ಕಾಲೇಜಿನ ಆವರಣ ಪರಭಾರೆ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದು ಮೈಸೂರು ಮಹಾರಾಜರು ಶಿಕ್ಷಣಕ್ಕೆಂದೇ ನೀಡಿದ ಜಾಗವಾಗಿದೆ. ಕ್ರೀಡೆ ಶಿಕ್ಷಣದ ಭಾಗವಾದರೂ ಖೇಲೋ ಸಂಸ್ಥೆ ಈ ಆವರಣದಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಿಸುತ್ತಿರುವುದು ಸರಿಯಲ್ಲ. ಇದಕ್ಕಾಗಿ ನಗರದಲ್ಲಿ ಬೇಕಾದಷ್ಟು ಜಾಗಗಳಿವೆ. ಮತ್ತು ಅಂತರರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರಗಳು ನಗರದಿಂದ ದೂರವೇ ಇರಬೇಕು. ಅದಕ್ಕಾಗಿ ವಿಶಾಲ ಜಾಗವಿರಬೇಕು. ಈಗಾಗಲೇ ಸಹ್ಯಾದ್ರಿ ಕಾಲೇಜ್ ಆವರಣ ಇಕ್ಕಟ್ಟಾಗಿದ್ದು ಇಲ್ಲಿ ಯಾವುದೇ ಕಾರಣಕ್ಕೂ ತರಬೇತಿ ಕೇಂದ್ರ ಬೇಡ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಮೊದಲಿಗೆ ಕುವೆಂಪು ವಿವಿ ನಗರ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾಗುತ್ತಿದ್ದಂತೆ ಪೊಲೀಸರು ತಡೆದರು. ಬಳಿಕ ಎಂ.ಆರ್.ಎಸ್. ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಸಂಚಾರಕ್ಕೆ ತೊಂದರೆಯಾಗಿತ್ತು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಪ್ರತಿಭಟನಾಕಾರರು ಮಣಿಯಲಿಲ್ಲ. ಕುವೆಂಪು ವಿವಿ ವಿಸಿ ಅಥವಾ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಕೊನೆಗೆ ಸ್ಥಳಕ್ಕೆ ಆಗಮಿಸಿದ ವಿಸಿ ಪ್ರೊ. ವೀರಭದ್ರಪ್ಪ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಪ್ರೊ. ರಾಜೇಂದ್ರ ಚೆನ್ನಿ, ಕೆ.ಪಿ. ಶ್ರೀಪಾಲ್, ಎಂ. ಗುರುಮೂರ್ತಿ, ಕೆ. ರಂಗನಾಥ್, ಹೆಚ್.ಪಿ. ಗಿರೀಶ್, ಪ್ರವೀಣ್ ಕುಮಾರ್, ಯೋಗೀಶ್, ಲೋಹಿತ್ , ಅಭಿಲಾಷ್, ವೆಂಕಟೇಶ್, ಅಭಿ, ಅರುಣ್ ಸೇರಿದಂತೆ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ, ವಿದ್ಯಾರ್ಥಿ ಸಂಘಟನೆಗಳು, ಕನ್ನಡಪರ ಹಾಗೂ ವಿವಿಧ ಪ್ರಗತಿ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News