ಆನ್‍ಲೈನ್ ಜೂಜು ನಿಷೇಧಿಸಲು ಪೊಲೀಸ್ ಕಾಯ್ದೆಗೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು, ಸೆ. 4: ರಾಜ್ಯದಲ್ಲಿ ಎಲ್ಲ ರೀತಿಯ `ಆನ್‍ಲೈನ್ ಜೂಜು' ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಶನಿವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದ್ದು, `ಆನ್‍ಲೈನ್ ಜೂಜು ನಿಷೇಧಿಸುವಂತೆ ಕೋರಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್, ಈ ಸಂಬಂಧ ಸೂಕ್ತ ಕ್ರಮಕ್ಕೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಸರಕಾರ ಕರ್ನಾಟಕ ಪೋಲೀಸ್ ಕಾಯ್ದೆಗೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಸಂಪುಟ ಸಭೆ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿಜಿಟಲ್, ಹಣ, ಟೋಕನ್ ವ್ಯವಸ್ಥೆ ಸೇರಿದಂತೆ ಯಾವುದೇ ರೂಪದಲ್ಲಿ ಹಣವನ್ನು ಪಣಕ್ಕಿಟ್ಟು ಆಡುವ ಆನ್‍ಲೈನ್ ಜೂಜಾಟವನ್ನು ನಿಯಂತ್ರಿಸಲು ಕರ್ನಾಟಕ ಪೆÇಲೀಸ್ ಕಾಯ್ದೆಯ ಅಡಿಯಲ್ಲಿ ಕ್ರಮ ಜರುಗಿಸಲು ಅವಕಾಶ ಕಲ್ಪಿಸಲಾಗಿದೆ. ಸೆ.13ರಿಂದ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಉದ್ದೇಶಿತ ಮಸೂದೆ ಮಂಡಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.
17.72 ಕೋಟಿ ರೂ.ಮಂಜೂರು: ಸಂಭವನೀಯ ಕೋವಿಡ್ ಮೂರನೆ ಮೂರನೆ ಅಲೆ ಎದುರಿಸಲು ಔಷಧಿಗಳು ಸೇರಿದಂತೆ ಅಗತ್ಯ ವೈದ್ಯಕೀಯ ಪರಿಕರಣಗಳ ಖರೀದಿಗೆ ಆರೋಗ್ಯ ಇಲಾಖೆಗೆ 17.72 ಕೋಟಿ ರೂ.ಮಂಜೂರು ಮಾಡುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ, ಮಾಗಡಿ ತಾಲೂಕಿನ ಚಿಕ್ಕಕಲ್ಯ ಮತ್ತು ಚನ್ನರಾಯಪಟ್ಟಣದ ಕೈಗಾರಿಕಾ ತರಬೇತಿ ಕೇಂದ್ರಗಳನ್ನು 101 ಕೋಟಿ ರೂ.ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೂ ಸಂಪುಟ ಸಮ್ಮತಿಸಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಪ್ರಕರಣ ಕೈಬಿಡಲು ತೀರ್ಮಾನ: ಮೈಸೂರು ಅರಮನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಲೋಕಾಯುಕ್ತ ಪ್ರಕರಣಗಳ ಕುರಿತಂತೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಪ್ರಕರಣ ಕೈಬಿಡಲು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಅರಮನೆಯ ಗೋಡೆ ಮತ್ತು ಕಂಬಗಳಿಗೆ ಚಿನ್ನದ ಲೇಪನ ಕಾಮಗಾರಿ, ಆನೆಗಳಿಗೆ ನೆಲಹಾಸು ಹಾಕುವ ಕಾಮಗಾರಿಗಳು, ಛಾಯಾಗ್ರಾಹಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಕೈಬಿಡಲು ಸಂಪುಟ ಸಮ್ಮತಿಸಿದೆ ಎಂದು ಅವರು ತಿಳಿಸಿದರು.
ಅಲ್ಲದೆ, ತುಮಕೂರು ಜಿಲ್ಲೆಯ ಹೇಮಾವತಿ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಒಟ್ಟು 98.50 ಕೋಟಿ ರೂ. ಬಿಡುಗಡೆಗೆ ನಿರ್ಧಾರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಮಾಧುಸ್ವಾಮಿ ಇದೇ ವೇಳೆ ಮಾಹಿತಿ ನೀಡಿದರು.