ಬೆಂಗಳೂರು: ವೃದ್ಧರು, ಒಂಟಿ ಮಹಿಳೆಯರ ಸುರಕ್ಷತೆಗಾಗಿ ಶೀಘ್ರ ಆನ್‍ಲೈನ್ ನೋಂದಣಿ
ಬೆಂಗಳೂರು, ಸೆ.4: ಹಿರಿಯ ನಾಗರಿಕರು ಹಾಗೂ ಒಂಟಿ ಮಹಿಳೆಯರ ಮಾಹಿತಿಯನ್ನು ಕಲೆಹಾಕಿ ಅವರ ಹೆಸರನ್ನು ಪೊಲೀಸ್ ಠಾಣೆ ನೋಂದಾಯಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2021ರ ಸೆ.15ರೊಳಗಾಗಿ ನಗರದ ಎಲ್ಲ ಠಾಣೆಯಲ್ಲೂ ಹಿರಿಯ ನಾಗರಿಕರು ಹಾಗೂ ಒಂಟಿ ಮಹಿಳೆಯರ ನೋಂದಣಿ ನಡೆಯಲಿದ್ದು ಆನ್‍ಲೈನ್ ನೋಂದಣಿ ಸೌಲಭ್ಯ ಸದ್ಯದಲ್ಲೇ ಲಭ್ಯವಾಗಲಿದೆ ಎಂದರು.
ನಗರದಲ್ಲಿರುವ ಹಿರಿಯ ನಾಗರಿಕರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಯಾ ಠಾಣೆ ಪೊಲೀಸರು, ಹಿರಿಯ ನಾಗರಿಕರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸಮಸ್ಯೆಗಳನ್ನು ಆಲಿಸಲಿದ್ದು ಹಿರಿಯ ನಾಗರಿಕರ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮನೆ ಹಾಗೂ ಸುತ್ತಮುತ್ತಲ ಸ್ಥಳದಲ್ಲಿ ಸುರಕ್ಷತೆ ಇಲ್ಲವೆಂದು ಭಾವಿಸುವ ಹಿರಿಯ ನಾಗರಿಕರು ತಮ್ಮ ವ್ಯಾಪ್ತಿಯ ಠಾಣೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಖುದ್ದಾಗಿ ಠಾಣೆಗೆ ಬರಲು ಸಾಧ್ಯವಾಗದವರು, ಬೆಂಗಳೂರು ಸಿಟಿ ಪೊಲೀಸ್ ಜಾಲತಾಣದಲ್ಲಿ ಆನ್‍ಲೈನ್ ಮೂಲಕವೂ ಹೆಸರು ನೋಂದಾಯಿಸಿ ಕೊಳ್ಳಬಹುದು ಎಂದರು.
ನೋಂದಾಯಿತ ಹಿರಿಯ ನಾಗರಿಕರು ಹಾಗೂ ಒಂಟಿ ಮಹಿಳೆಯರ ಮನೆಗಳ ಸ್ಥಳಗಳನ್ನು ಜಿಪಿಎಸ್ ವ್ಯವಸ್ಥೆಯಲ್ಲಿ ಗುರುತಿಸಲಾಗುವುದು. ಗಸ್ತು ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಕನಿಷ್ಠ 10 ನಿಮಿಷ ನೋಂದಾಯಿತರ ಜೊತೆ ಮಾತುಕತೆ ನಡೆಸಲಿದ್ದಾರೆ. ಸಿಬ್ಬಂದಿ ಹೋಗಿಬಂದ ದಾಖಲೆ ಸರ್ವರ್‍ನಲ್ಲಿ ನಮಗೆ ಲಭ್ಯವಾಗಲಿದೆ. ಆಗಾಗ ಪೊಲೀಸರು ಮನೆಗೆ ಹೋಗಿ ಬಂದರೆ, ನೋಂದಾಯಿತರಿಗೆ ಧೈರ್ಯ ಬರುತ್ತದೆ ಎಂದು ತಿಳಿಸಿದರು.
ಜನರ ಸಮಸ್ಯೆ ಆಲಿಸಲು ನಾನು ನಡೆಸುತ್ತಿರುವ ಜನಸಂಪರ್ಕ ಸಭೆಯಲ್ಲಿ ಹಿರಿಯ ನಾಗರಿಕರೇ ಹೆಚ್ಚಿರುತ್ತಾರೆ. ಹೀಗಾಗಿ, ಅವರ ಸಮಸ್ಯೆಗಳನ್ನು ವೈಯಕ್ತಿಕವಾಗಿ ಆಲಿಸುತ್ತೇನೆ. ನಿಯಂತ್ರಣ ಕೊಠಡಿ ಸಿಬ್ಬಂದಿ, ದಿನಕ್ಕೆ 50 ನೋಂದಾಯಿತ ಹಿರಿಯ ನಾಗರಿಕರಿಗೆ ಕರೆ ಮಾಡಿ ಸುರಕ್ಷತೆ ಬಗ್ಗೆ ವಿಚಾರಿಸಲಿದ್ದಾರೆ. ಯಾವುದಾದರೂ ಸಮಸ್ಯೆ ಇದ್ದರೆ, ಸಂಬಂಧಪಟ್ಟ ಠಾಣೆಗೆ ರವಾನಿಸಲಿದ್ದಾರೆ ಎಂದು ತಿಳಿಸಿದರು.