ಪರಿಸರವಾದಿಗಳ ಮೇಲೆ ಹಲ್ಲೆ ಪ್ರಕರಣ: ಪೊಲೀಸ್ ಠಾಣೆಯಲ್ಲಿದ್ದ ಆರೋಪಿಗಳ ವಿಡಿಯೋ ವೈರಲ್

Update: 2021-09-04 14:39 GMT

ಚಿಕ್ಕಮಗಳೂರು, ಸೆ.4: ಜಿಲ್ಲೆಯ ಪರಿವಾದಿ ಡಿ.ವಿ.ಗಿರೀಶ್ ಹಾಗೂ ಅವರ ತಂಡದ ಮೇಲೆ ಇತ್ತೀಚೆಗೆ ಹಲ್ಲೆ ನಡೆದ ಪ್ರಕರಣ ಸಂಬಂಧ ಗ್ರಾಮಾಂತರ ಠಾಣೆಯ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದು, ಈ ಪ್ರಕರಣದ ಬಂಧಿತರು ಇನ್ನೂ ಆರೋಪಿಗಳಿಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಅವರ ಹೆಸರು ಹಾಗೂ ಭಾವಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ. 

ಆದರೆ ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ 7 ಆರೋಪಿಗಳು ಪೊಲೀಸ್ ಠಾಣೆಯಲ್ಲಿದ್ದ ವೇಳೆ ಚಿತ್ರೀಕರಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಂಬಂಧ ಪೊಲೀಸ್ ಇಲಾಖೆ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಪೊಲೀಸರ ಕಾರ್ಯವೈಖರಿಯನ್ನು ಸಂಶಯದಿಂದ ನೋಡುವಂತೆ ಮಾಡಿದೆ.

ಆ.30ರಂದು ಜಿಲ್ಲೆಯ ಪರಿಸರವಾದಿ ಡಿ.ವಿ.ಗಿರೀಶ್ ಹಾಗೂ ಅವರ ಸ್ನೇಹಿತರು ಜಿಪ್ಸಿ ವಾಹನದಲ್ಲಿ ಸಂತವೇರಿಯಿಂದ ಚಿಕ್ಕಮಗಳೂರಿನತ್ತ ಬರುತ್ತಿದ್ದ ವೇಳೆ 8 ಮಂದಿ ಯುವಕರು ಮಧ್ಯಪಾನ ಮಾಡಿ ವಾಹನದಲ್ಲಿದ್ದ ಯುವತಿಯನ್ನು ಚುಡಾಯಿಸಿದ್ದರು. ಇದನ್ನು ಡಿ.ವಿ.ಗಿರೀಶ್ ಪ್ರಶ್ನಿಸಿದ್ದರು. ಬಳಿಕ ಯುವಕರು ಗಿರೀಶ್ ಅವರ ವಾಹನವನ್ನು ಅಡ್ಡಹಾಕಿ ಥಳಿಸಿದ್ದರೆಂದು ಡಿ.ವಿ.ಗಿರೀಶ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 8 ಯುವಕರ ವಿರುದ್ಧ ದೂರು ದಾಖಲಿಸಿದ್ದರು.

ಪೊಲೀಸರು ಈ ಘಟನೆ ಸಂಬಂಧ ಆರೋಪಿಗಳ ವಿರುದ್ಧ ಪೊಕ್ಸೊ ಪ್ರಕರಣದಡಿಯಲ್ಲಿ ದೂರು ದಾಖಲಿಸಿಕೊಂಡು 8 ಮಂದಿ ಪೈಕಿ 7 ಮಂದಿಯನ್ನು ಕಳೆದ ಗುರುವಾರ ಬಂಧಿಸಿದ್ದರು. ಇದೀಗ ಆರೋಪಿಗಳು ಠಾಣೆಯ ಒಂದು ಮೂಲೆಯಲ್ಲಿ ಕುಳಿತು ಪೊಲೀಸರ ಬಳಿ ಕಣ್ಣೀರಿಡುತ್ತಿರುವ ದೃಶ್ಯಗಳನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಲಾಗಿದೆ.

ಆ.30ರಂದು ಆರೋಪಿಗಳು ಡಿ.ವಿ.ಗಿರೀಶ್ ಹಾಗೂ ಅವರ ತಂಡದವರಿಗೆ ಹಲ್ಲೆ ಮಾಡುತ್ತಿರುವ ದೃಶ್ಯ ಹಾಗೂ ಇದೇ ಆರೋಪಿಗಳು  ಹೆದರಿ ಕಣ್ಣೀರಿಡುತ್ತಿರುವ ದೃಶ್ಯಗಳನ್ನು ಮರುಜೋಡಣೆ ಮಾಡಿ, ಹಲ್ಲೆ ವಿಡಿಯೋ ಹಾಗೂ ಆರೋಪಿಗಳು ಕಣ್ಣೀರಿಡುತ್ತಿರುವ ದೃಶ್ಯಗಳನ್ನು "ಬಿಪೋರ್, ಆಪ್ಟರ್" ಎಂದು ಶೀರ್ಷಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ವಿಡಿಯೋದಲ್ಲಿ ಆರೋಪಿಗಳು ಪೊಲೀಸ್ ಠಾಣೆಯಲ್ಲಿ ಪೊಲೀಸರತ್ತ ಕೈಮುಗಿಯುತ್ತಿರುವುದು, ಕಣ್ಣೀರಿಡುವುದು ಸೇರಿದಂತೆ ಆರೋಪಿಗಳು ಚಿಕ್ಕಮಗಳೂರು ನಗರದ ಜಿಲ್ಲಾ ಕಾರಾಗೃಹದ ಒಳಗೆ ಹೋಗುವವರೆಗಿನ ವಿಡಿಯೋ ಇದ್ದು, ಠಾಣೆಯಲ್ಲಿ ಪತ್ರಕರ್ತರಿಗೆ ಆರೋಪಿಗಳ ಪೊಟೊ, ವಿಡಿಯೋ ಮಾಡಲು ಬಿಡದ ಪೊಲೀಸರು, ಇದಕ್ಕೆಲ್ಲ ಅವಕಾಶ ನೀಡಿದ್ದು ಹೇಗೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ನ್ಯಾಯಾಲಯದ ಇತ್ತೀಚಿನ ಆದೇಶದ ಪ್ರಕಾರ ಆರೋಪಿಗಳ ಮೇಲಿನ ಆರೋಪ ಸಾಬೀತಾಗುವುದಕ್ಕೂ ಮುನ್ನ ಅವರ ಹೆಸರು ಹಾಗೂ ಭಾವ ಚಿತ್ರಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸುವುದು, ಪ್ರಕಟಿಸುವುದನ್ನು ಮಾಡುವಂತಿಲ್ಲ. ಆದರೆ ಪೊಲೀಸರ ವಶದಲ್ಲಿದ್ದ ಆರೋಪಿಗಳ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ  ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಅವರನ್ನು ಕೇಳಿದರೆ, ಪರಿಶೀಲಿಸುವುದಾಗಿ ಮಾತ್ರ ಹೇಳಿಕೆ ನೀಡಿದ್ದು, ಈ ಸಂಬಂಧ ಯಾವುದೇ ಸ್ಪಷ್ಟನೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News