ಅಧಿಕಾರ ಇದ್ದಾಗ ಕೆಲಸ ಮಾಡಲಿಲ್ಲ, ಈಗ ಮಾಡೋಕೆ ಕೆಲಸ ಇಲ್ಲ: ಡಾ.ಎಚ್.ಸಿ.ಮಹದೇವಪ್ಪಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು

Update: 2021-09-04 16:17 GMT

ಮೈಸೂರು,ಸೆ.4: ಅಧಿಕಾರ ಇದ್ದಾಗ ಕೆಲಸ ಮಾಡಲಿಲ್ಲ, ಈಗ ಮಾಡೋಕೆ ಕೆಲಸ ಇಲ್ಲ. ನನ್ನ ಮೇಲೆ ಸದಾ ಟೀಕೆ ಮಾಡುತ್ತಾ, ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಾ, ಜನರಿಂದ ಪದೇ ಪದೆ ತಿರಸ್ಕೃತಗೊಂಡು ನಿರ್ನಾಮವಾಗಿದ್ದರೂ ತಾನಿನ್ನೂ  ಬದುಕಿದ್ದೇನೆಂದು ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ನಿಮ್ಮ ಪಕ್ಷದಲ್ಲಿ ಕೆಲವರಿಗಿದೆ ಅಂತ ಗೊತ್ತು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. 

ಸಂವಾದಕ್ಕೆ ಆಹ್ವಾನಿಸಿರುವ ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಅವರಿಗೆ ಪತ್ರದ ಮೂಲಕ ತಿರುಗೇಟು ನೀಡಿರುವ  ಪ್ರತಾಪ್ ಸಿಂಹ, ನೀವೊಬ್ಬರು ಮಾಜಿ ಸಚಿವರು, ಮೈಸೂರು ಜಿಲ್ಲೆಯ ಉಸ್ತುವಾರಿ ನಿಭಾಯಿಸಿದವರು. ಈ ಪತ್ರ, ಫಾರ್ಮಾಲಿಟಿಸ್ ಏನೂ ಬೇಡ. ಫೋನ್ ತೆಗೆದು ನನಗೆ ಕರೆ ಮಾಡಿ  ಚರ್ಚೆ ಮಾಡೋಣ ಬಾ ಎಂದರೆ ಸಾಕು. ಅದಕ್ಕಿಂತ ಮೊದಲು ನಾನು ನಿಮಗೆ ಎರಡು ಪ್ರಶ್ನೆ ಕೇಳಿದ್ದೆ. ಅದಕ್ಕೆ ದಾಖಲೆ ಸಮೇತ ಉತ್ತರ ಕೊಡುತ್ತೀರಾ? ಎಂದು ತಿರುಗೇಟು ನೀಡಿದ್ದಾರೆ. 

1. ಎಂಟು ಸಾವಿರ ಕೋಟಿಯ ಈ 10 ಪಥದ ಯೋಜನೆಗೆ 2014 ಕ್ಕಿಂತ ಮೊದಲು ಸಂಸದರಾಗಿದ್ದ ಕೆಆರ್  ನಗರದ ಹಳ್ಳಿ ಹಕ್ಕಿಯಾಗಲಿ, 2018 ರವರೆಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಾಗಲಿ, ಅವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ. ಮಹಾದೇವಪ್ಪನವರಾದ ನೀವಾಗಲಿ ಕನಿಷ್ಠ 8 ಪೈಸಾ ಕೊಟ್ಟಿದ್ದರೆ ಮೊದಲು ತೋರಿಸಿ ಎಂದು ಪ್ರಶ್ನಿಸಿದ್ದಾರೆ.

2. ಜಲದರ್ಶಿನಿ ಗೇಟ್ ನಿಂದ ಪಡುವಾರಳ್ಳಿ ಸರ್ಕಲ್ವರೆಗೂ 6 ಪಥದ ರಸ್ತೆ ಮಾಡುತ್ತೀನಿ ಅಂತ ಗಡ್ಕರಿಯವರಿಂದ ಅಖಈನಡಿ 12 ಕೋಟಿ ದುಡ್ಡು ತಂದು ಕೆಲಸ ಮಾಡಿದಿರಾ? ಎಲ್ಲಿದೆ 6 ಪಥದ ರಸ್ತೆ ತೋರಿಸಿ? ವಾಗ್ದಾಳಿ ನಡೆಸಿದ್ದಾರೆ. 

ಈ ಎರಡು ಪ್ರಶ್ನೆಗಳಿಗೆ ನೀವು ಮೊದಲು ದಾಖಲೆ ಸಮೇತ ನನಗೆ ಉತ್ತರ ಕಳಿಸಿ. ಆ ಉತ್ತರದ ಜೊತೆ ನಿಮ್ಮ ಮೊಬೈಲ್ ನಂಬರ್ ಕೂಡ ಕೊಡಿ. ನಾನೇ ನಿಮಗೆ ಕರೆ ಮಾಡಿ ನಮ್ಮಿಬ್ಬರ ಸಂವಾದದ ದಿನಾಂಕ ನಿಗದಿ ಮಾಡೋಣ. ನಾನು ಒಬ್ಬನೇ ಬರುತ್ತೇನೆ, ನೀವು ಜನರಿಂದ ಆಯ್ಕೆಯಾದ ಹಾಗು ಆಯ್ಕೆಯಾಗಿದ್ದ ನಿಮ್ಮ ಪಕ್ಷದ ಎಲ್ಲ ಹಾಲಿ, ಮಾಜಿ ಜನಪ್ರತಿನಿಧಿಗಳ ಜೊತೆ ಬನ್ನಿ. ದಾಖಲೆ ಆಧಾರಿತ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News