ನ್ಯಾಯಾಂಗ ಪ್ರಜಾಪ್ರಭುತ್ವದ ಆಧಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-09-04 16:30 GMT

ಬೆಂಗಳೂರು, ಸೆಪ್ಟೆಂಬರ್ 04: ನ್ಯಾಯಾಂಗವು ಪ್ರಜಾಪ್ರಭುತ್ವದ ಆಧಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ವಕೀಲ ಸಂಘ , ಬೆಂಗಳೂರು ಇವರ ವತಿಯಿಂದ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ  ಆಯೋಜಿಸಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ನ್ಯಾಯಮೂರ್ತಿಗಳಾದ  ಅಭಯ್ ಶ್ರೀನಿವಾಸ್ ಓಕಾ ಹಾಗೂ ಬಿ.ವಿ.ನಾಗರತ್ನ  ಅವರ  ಸನ್ಮಾನ ಕಾರ್ಯಕ್ರಮದಲ್ಲಿ  ಪಾಲ್ಗೊಂಡು  ಮಾತನಾಡಿದ ಸಿಎಂ, ನ್ಯಾಯಾಂಗ  ಮತ್ತು ಶಾಸಕಾಂಗದ ಮಧ್ಯೆ ಉತ್ತಮ ಸಂಬಂಧ ಇರಬೇಕು. ನ್ಯಾಯಾಂಗವೂ ಸಹ ಒಂದು ಸಂಸ್ಕೃತಿಯೇ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು,  ಸಂವಿಧಾನವು ಪ್ರಜಾಪ್ರಭುತ್ವದ  ಆಧಾರ.  ಪ್ರಜಾಪ್ರಭುತ್ವದ ಆಧಾರದ ಮೇಲೆ   ಕಲ್ಯಾಣ ರಾಜ್ಯವನ್ನು ಸ್ಥಾಪಿಸಬೇಕೆಂದು ಸಂವಿಧಾನ ರಚಿಸಿದ ನಮ್ಮ ಹಿರಿಯರು ಹೇಳಿದ್ದಾರೆ ಎಂದರು.

ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಪರಸ್ಪರ ಅವಲಂಬನೆ ಇದ್ದು, ಇದರಿಂದ ಎರಡೂ ಸಂಸ್ಥೆಗಳಲ್ಲಿ ಹೊಣೆಗಾರಿಕೆಯನ್ನು ಉಂಟುಮಾಡುತ್ತದೆ. ಅಭಯ್ ಶ್ರೀನಿವಾಸ್ ಓಕಾ ಅವರು ವಿಶಿಷ್ಟ ಹಾಗೂ ಅತ್ಯುತ್ತಮ ಸಾಮರ್ಥ್ಯವುಳ್ಳ ನ್ಯಾಯಮೂರ್ತಿಗಳು , ನ್ಯಾಯಾಂಗ ವ್ಯವಸ್ಥೆಯಲ್ಲಿ ತಂದ  ಬದಲಾವಣೆಗಳು ಗಮನಾರ್ಹವಾದುದು. ಅಪರಾಧಿಗಳಿಗೆ ತಿದ್ದಿಕೊಳ್ಳಲು ನೀಡುವ ಅವಕಾಶವೇ  ಸೂಕ್ತ ಶಿಕ್ಷೆ ಎನ್ನುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದರು. ಅವರಿದ್ದಲ್ಲಿ ಅಸ್ಪಷ್ಟತೆಗೆ ಅವಕಾಶವಿಲ್ಲ. ಸಹಾನೂಭೂತಿ ಇದ್ದ ನ್ಯಾಯಮೂರ್ತಿಗಳಾಗಿದ್ದ ಅವರು ಸಮಸ್ಯೆಯ  ಆಳಕ್ಕೆ ಇಳಿದು, ಸಂಪೂರ್ಣ ಅರಿತು  ಅದರ ಮೂಲಕ್ಕೆ ಹೋಗಿ ಬಗೆಹರಿಸುತ್ತಿದ್ದರು. ಅವರು ಸರ್ವೋಚ್ಚ ನ್ಯಾಯಾಲಯದ ಆಸ್ತಿಯಾಗಲಿದ್ದಾರೆ  ಎಂದ ಅವರು ಕರ್ನಾಟಕದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಅವರ ಪಯಣವನ್ನು ಓಕಾ ಅವರು ನೆನಪಿನಲ್ಲಿಡುತ್ತಾರೆ ಹಾಗೂ ಕರ್ನಾಟಕ ರಾಜ್ಯ ಅವರನ್ನು ಸದಾ ಸ್ಮರಿಸುತ್ತದೆ ಎಂದರು.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಉನ್ನತ ಹುದ್ದೆಗೇರಿರುವುದರಿಂದ ಹೃದಯ ತುಂಬಿ ಬಂದಿದೆ ಎಂದ ಮುಖ್ಯಮಂತ್ರಿಗಳು ಅತ್ಯಂತ ವಿನಮ್ರ ಹಾಗೂ ಸರಳ ಸ್ವಭಾವದವರು. ಸಾಮಾನ್ಯರು ಅವರನ್ನು ಸುಲಭವಾಗಿ ಮಾತನಾಡಿಸಬಹುದಾಗಿತ್ತು. ಅವರು ಕರ್ನಾಟಕದ ಸಂಸ್ಕಾರವನ್ನು ಪ್ರತಿನಿಧಿಸಲಿದ್ದಾರೆ ಎನ್ನುವುದು ನಮ್ಮ ಹೆಮ್ಮೆ. ನಾಗರಿಕತೆಯೊಂದಿಗೆ ಸಂಸ್ಕೃತಿ ಉಳಿದಾಗ ಮಾತ್ರ ದೇಶ ಸುಭಿಕ್ಷವಾಗುತ್ತದೆ.  ಅವರು ಭಾರತದ ಮುಖ್ಯ ನ್ಯಾಯಾಧೀಶರಾಗಲಿ ಎಂದು ಹಾರೈಸಿದರು. 

ರಾಜ್ಯದ ನ್ಯಾಯಾಲಯಗಳ ಮೂಲಭೂತ ಸೌಕರ್ಯಗಳು ದೇಶದಲ್ಲಿಯೇ ಅತ್ಯುತ್ತಮವಾಗಿದೆ. ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವವನ್ನು ಉಳಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸುಭದ್ರವಾಗಿ ಉಳಿಯಲಿದೆ ಎಂದರು.

ಇದೊಂದು ಅಪರೂಪದ ಸಮಾರಂಭ. ಬಹಳಷ್ಟು ಮುಖ್ಯಮಂತ್ರಿಗಳಿಗೆ ಈ ಅವಕಾಶ ಸಿಕ್ಕಿಲ್ಲ.  ಕರ್ನಾಟಕದ ಇಬ್ಬರು  ಶ್ರೇಷ್ಠ ನ್ಯಾಯಮೂರ್ತಿಗಳು, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ  ಉನ್ನತ ಹುದ್ದೆಗೆ ಏರಿರುವ ಹೊತ್ತಿನಲ್ಲಿ ಆತ್ಮೀಯವಾಗಿ ಸನ್ಮಾನಿಸುವ ನನಗೆ ಇಂಥ ಅವಕಾಶ ದೊರೆತಿರುವುದು  ನನ್ನ ಸೌಭಾಗ್ಯ ಎಂದರು.

ಕಾರ್ಯಕ್ರಮದಲ್ಲಿ ಉಚ್ಛ ನ್ಯಾಯಾಲಯದ  ಮುಖ್ಯ ನ್ಯಾಯಾಧೀಶ ಸತೀಶ್ ಚಂದ್ರ  ಶರ್ಮಾ, ಅಡ್ವೊಕೇಟ್ ಜನರಲ್ ಪ್ರಭುಲಿಂಗ.ಕೆ.ನಾವಡಗಿ , ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News