ಡಾ.ಮುಮ್ತಾಝ್ ಅಹ್ಮದ್ ಖಾನ್ ಕೊಡುಗೆ ಅನನ್ಯ: ರಾಮಲಿಂಗಾರೆಡ್ಡಿ

Update: 2021-09-05 16:01 GMT

ಬೆಂಗಳೂರು, ಸೆ.5: ಶಿಕ್ಷಣ ತಜ್ಞರೂ ಆದ ಅಲ್ ಅಮೀನ್ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ.ಮುಮ್ತಾಝ್ ಅಹ್ಮದ್ ಖಾನ್ ಅವರು ಶಿಕ್ಷಣ ಕ್ಷೇತ್ರಕ್ಕೆ, ಮಹಿಳೆಯ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸ್ಮರಿಸಿದರು.

ನಗರದಲ್ಲಿಂದ ಹೊಸೂರು ರಸ್ತೆಯ ಗೌಸಿಯಾ ಇಂಡಸ್ಟ್ರಿಯಲ್ ಹಾಗೂ ಇಂಜಿನಿಯರಿಂಗ್ ಟ್ರಸ್ಟ್ ಆವರಣದಲ್ಲಿ ಬಾಬಾ-ಎ-ತಾಲಿಮ್- ಡಾ.ಮುಮ್ತಾಝ್ ಅಹ್ಮದ್ ಖಾನ್ ಸ್ಮರಣಾರ್ಥ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ, ಆರೋಗ್ಯ ಶಿಬಿರ ಹಾಗೂ ಕಾರ್ಮಿಕರಿಗೆ ದಿನಸಿ ಕಿಟ್ ಹಂಚಿಕೆ ಬಳಿಕ ಅವರು ಮಾತನಾಡಿದರು.

ಬಡ ಮತ್ತು ಮಾಧ್ಯಮ ವರ್ಗಕ್ಕೆ ಉನ್ನತ ಶಿಕ್ಷಣ ಕೈಸೇರುವಂತೆ ಮಾಡುವಲ್ಲಿ ಡಾ.ಮುಮ್ತಾಝ್ ಅಹ್ಮದ್ ಖಾನ್ ಯಶಸ್ವಿಯಾಗಿದ್ದಾರೆ, ಅವರು ಸ್ಥಾಪಿಸಿದ ಅಲ್ ಅಮೀನ್ ಎಜುಕೇಷನಲ್ ಸೊಸೈಟಿ ಅಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ ಅಮೀನ್ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಉಮರ್ ಇಸ್ಮಾಯಿಲ್ ಖಾನ್ ಮಾತನಾಡಿ, ಈ ಹಿಂದಿನ ಮುಖ್ಯಸ್ಥರಾದ ಡಾ.ಮುಮ್ತಾಝ್ ಅಹ್ಮದ್ ಖಾನ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರು ನೀಡಿ ಹೋಗಿರುವ ಮಾರ್ಗದರ್ಶನದಂತೆಯೇ ಕಾರ್ಯನಿರ್ವಹಿಸಲಾಗುವುದು. ಮತ್ತಷ್ಟು ಬಡವರಿಗೆ ಶಿಕ್ಷಣದ ಸೌಲಭ್ಯಗಳನ್ನು ಮುಟ್ಟಿಸಲು ಶ್ರಮವಹಿಸಲಾಗುವುದು ಎಂದರು.

ಅಲ್ಲದೆ, ನಾಡಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿರುವ ಅಲ್ ಅಮೀನ್ ಶಿಕ್ಷಣ ಸಮೂಹ ಸಂಸ್ಥೆಯು ಶಿಕ್ಷಣ ಸೇರಿದಂತೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ 55 ವರ್ಷಗಳಿಂದ ಸಕ್ರಿಯವಾಗಿದೆ. ಮುಂದಿನ ದಿನಗಳಲ್ಲು ಮತ್ತಷ್ಟು ಶೈಕ್ಷಣಿಕ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ನುಡಿದರು.

ಈ ಸಂದರ್ಭದಲ್ಲಿ ಗೌಸಿಯಾ ಇಂಡಸ್ಟ್ರಿಯಲ್ ಹಾಗೂ ಇಂಜಿನಿಯರಿಂಗ್ ಟ್ರಸ್ಟ್ ಅಧ್ಯಕ್ಷ ಅಹ್ಮದ್ ಶರೀಫ್ ಸಿರಾಝ್, ಅಲ್ ಅಮೀನ್ ಎಜುಕೇಷನಲ್ ಸೊಸೈಟಿಯ ಉಪಾಧ್ಯಕ್ಷ ಝುಬೇರ್ ಅನ್ವರ್ ಚಿಂತಕರೂ ಆದ ಕಾರ್ಯ ನಿರ್ವಹಣಾ ಸದಸ್ಯ ಎಂ.ಝೆಡ್.ಅಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News