ಮಧ್ಯಾಹ್ನದ ಹೊತ್ತಿಗೆ ಕಲಬುರಗಿ ಪಾಲಿಕೆ ಚುನಾವಣೆ ಫಲಿತಾಂಶ: ಜಿಲ್ಲಾಧಿಕಾರಿ

Update: 2021-09-06 04:09 GMT
ಮತ ಎಣಿಕೆ ಸಿದ್ಧತೆಗಳನ್ನು ವೀಕ್ಷಿಸುತ್ತಿರುವ ಜಿಲ್ಲಾಧಿಕಾರಿ 

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ 55 ವಾರ್ಡ್‍ಗಳ ಮತ ಎಣಿಕೆಯು ಸೆಪ್ಟಂಬರ್ 6ರಂದು ಬೆಳಿಗ್ಗೆ 8 ಗಂಟೆಯಿಂದ ನಗರದ ಎಸಿಟಿ ನೂತನ ವಿದ್ಯಾಲಯ ಅಂತರಾಷ್ಟ್ರೀಯ ಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದರು.

ಎಸಿಟಿ ನೂತನ ವಿದ್ಯಾಲಯ ಅಂತರರಾಷ್ಟ್ರೀಯ ಶಾಲೆಯಲ್ಲಿ ಮತ ಎಣಿಕೆ ಸಿದ್ಧತೆಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟ್ರಾಂಗ್ ರೂಂನ್ನು ಅಭ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ಅಂದು ಬೆಳಿಗ್ಗೆ 07.45 ಗಂಟೆಗೆ ತೆರೆಯಾಗುವುದು ಎಂದರು. 

11 ಕೊಠಡಿಯಲ್ಲಿ ಮತಣಿಕೆ ಏಕಕಾಲಕ್ಕೆ ಶುರುವಾಗಲಿದ್ದು, ಇದಕ್ಕಾಗಿ 11 ಚುನಾವಣಾಧಿಕಾರಿಗಳ ನೇಮಿಸಲಾಗಿದೆ. ಪ್ರತಿಯೊಬ್ಬ ಚುನಾವಣಾಧಿಕಾರಿಗೆ 05 ಟೇಬಲ್‍ಗಳಂತೆ ನಿಗದಿಪಡಿಸಲಾಗಿದೆ ಹಾಗೂ ಒಂದು ಟ್ಯಾಬುಲೇಷನ್ ಟೇಬಲ್ ಅಳವಡಿಸಲಾಗಿದೆ.  ಮತ ಎಣಿಕೆ ಕಾರ್ಯಕ್ಕಾಗಿ 55 ಮತ ಎಣಿಕೆ ಮೇಲ್ವಿಚಾರಕರನ್ನು ಹಾಗೂ 55 ಜನ ಎಣಿಕೆ ಸಹಾಯಕರನ್ನು ಹಾಗೂ ಶೇ 10 ರಷ್ಟು ಹೆಚ್ಚುವರಿಯಾಗಿ ಈಗಾಗಲೇ ನಿಯೋಜಿಸಲಾಗಿದ್ದು, ಇವರಿಗೆಲ್ಲಾ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಗೆ 05 ಜನ ಎಣಿಕೆ ಏಜೆಂಟರು ಇರಲಿದ್ದಾರೆ ಎಂದು ಮಾಹಿತಿ ನೀಡಿದರು. 

ಒಂದು ವಾರ್ಡಿನ ಮತ ಎಣಿಕೆ ಪೂರ್ಣಗೊಂಡ ತರುವಾಯ ಹಾಗೂ ಟ್ಯಾಬುಲೇಷನ್ ತರುವಾಯ ನಿಯಮಾನುಸಾರ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿ ಘೋಷಣೆ ಮಾಡುವರು ಎಂದು ಅವರು ತಿಳಿಸಿದರು.

ಭದ್ರತಾ ಕೊಠಡಿಯಿಂದ ಎಣಿಕೆ ಕೇಂದ್ರಕ್ಕೆ, ಎಣಿಕೆ ಟೇಬಲ್ಲಿಗೆ ವ್ಯವಸ್ಥಿತವಾಗಿ ಕಂಟ್ರೋಲ್ ಯೂನಿಟ್ ಕಳುಹಿಸಲು ಲಾಗ್ ಪುಸ್ತಕ ನಿರ್ವಹಿಸಿ ಎಣಿಕೆ ಮೇಲ್ವಿಚಾರಕರ ಸಹಿಂಯನ್ನು ಪಡೆಯಲು ಮತ್ತು ಎಣಿಕೆ ನಂತರ ಕಂಟ್ರೋಲ್ ಯುನಿಟ್‍ನ್ನು ಭದ್ರತಾ ಕೊಠಡಿಗೆ ಹಿಂಪಡೆದು ಮತ್ತೆ ನಿಯಮಾನುಸಾರ ಮೊಹರು ಮಾಡಲು ಆಯಾ ಸಹಾಯಕ ಚುನಾವಣಾಧಿಕಾರಿಗಳಿಗೆ ಒಂದು ತಂಡವನ್ನು ರಚಿಸಿದೆ ಎಂದು ಅವರು ವಿವರಿಸಿದರು.  

ಮತ ಎಣಿಕೆ ಕೇಂದ್ರ ವ್ಯಾಪ್ತಿಯ 100 ಮೀಟರ್ ಅಂತರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಮತ ಎಣಿಕೆ ಪೂರ್ವದಿನದಂದು ಸೆ 5ರಂದು  ಸಾಯಂಕಾಲ 06 ಗಂಟೆಯಿಂದ ಮತ ಎಣಿಕೆ ದಿನದ ಮಧ್ಯರಾತ್ರಿಯವರೆಗೆ ಮದ್ಯಪಾನ ಮಾರಾಟ ಹಾಗೂ ತಯಾರಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣ ಫಲಿತಾಂಶ ಲಭ್ಯವಾಗುವ ಸಾಧ್ಯತೆಯಿದ್ದು, ವಿಜೇತ ಅಭ್ಯರ್ಥಿಗಳು ಮೆರೆವಣಿಗೆ ಮಾಡುವಂತಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. 

ಮತಎಣಿಕೆ ದಿನದಂದು ನಗರ ಪೋಲಿಸ್ ಆಯುಕ್ತರಿಂದ ಸೂಕ್ತ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಅಂತೆಯೇ ಮತ ಎಣಿಕೆ ಕೇಂದ್ರದ ವಿದ್ಯುಚ್ಛಕ್ತಿ ಕಡಿತಗೊಳಿಸದಂತೆ ಜೆಸ್ಕಾಂ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ಅವರು ಹೇಳಿದರು.
     
ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಯವರು ಹಾಗೂ ರಾಜಕೀಯ ಪಕ್ಷದವರಿಗೆ ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಲಾಗುವುದು ಹಾಗೂ ಮತಎಣಿಕೆ ಕೇಂದ್ರ ಎಲ್ಲಾ ಕೊಠಡಿಗಳಿಗೆ ಸೂಕ್ತ ಸ್ಯಾನಿಟೈಜೆಷನ್ ಮಾಡಿಸಲಾಗಿದೆ ಹಾಗೂ ಎಲ್ಲಾ ಮತ ಎಣಿಕೆ ಮೇಲ್ವಿಚಾರಕರಿಗೆ ಹಾಗೂ ಸಿಬ್ಬಂದಿಯವರಿಗೆ ಹ್ಯಾಂಡ್‍ಗ್ಲೌಸ್, ಫೇಸ್ ಶೀಲ್ಡ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರೂ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಅವರು ತಿಳಿಸಿದರು.

ಕೌಂಟಿಂಗ್ ಕೇಂದ್ರ ಹಾಗೂ ಸುತ್ತಮುತ್ತ ಭದ್ರತೆ: ಇದೇ ಸಂದರ್ಭದಲ್ಲಿ ಮಾತನಾಡಿದ ಡಿಸಿಪಿ ಅಡೂರು ಶ್ರೀನಿವಾಸಲು, ವಾಹನ ದಟ್ಟಣೆಯಾಗುವ ತಡೆಯುವ ನಿಟ್ಟಿನಲ್ಲಿ ಕಾಲೇಜು ಬಳಿಯ ಮುಖ್ಯರಸ್ತೆಯ ವಾಹನ ಸಂಚಾರ ಬಂದ್ ಮಾಡಲಾಗಿದೆ. ಪಾಸ್ ಇದ್ದಂತಹ ಅಧಿಕಾರಿಗಳು ಮತ್ತು ಚುನಾವಣಾ ಸಿಬ್ಬಂದಿ, ಅಭ್ಯರ್ಥಿಗಳು ಹಾಗೂ ಏಜೆಂಟರು ವಾಹನ ಸಮೇತ ಎನ್.ವಿ. ಕಾಲೇಜು ಮೈದಾನ ಪ್ರವೇಶಿಸಬಹುದಾಗಿದೆ. ಪಾಸಿಲ್ಲದವರನ್ನು ಒಳಗೆ ಬಿಡುವುದಿಲ್ಲ ಎಂದು ಅವರು ಹೇಳಿದರು.

170 ಪೊಲೀಸರು ಹಾಗೂ 100 ಮಂದಿ ಗೃಹರಕ್ಷಕ ದಳ ನಿಯೋಜಿಸಲಾಗಿದ್ದು, ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಮೊಬೈಲ್ ಸೇರಿದಂತೆ ನಿರ್ಬಂಧಿತ ವಸ್ತುಗಳನ್ನು ತರುವಂತಿಲ್ಲ. ಎಲ್ಲರನ್ನೂ ತಪಾಸಣೆ ಮಾಡಲಾಗುವುದು ಎಂದರು.

ಇದೆಲ್ಲ ಭದ್ರತೆಯ ಉಸ್ತುವಾರಿಯನ್ನು ಎಸಿಪಿ ಅವರಿಗೆ ವಹಿಸಲಾಗಿದ್ದು, ಮೇಲುಸ್ತುವಾರಿಯನ್ನು ಡಿಸಿಪಿ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಚುನಾವಣಾಧಿಕಾರಿಯೂ ಆಗಿರುವ ಎಪಿಎಂಸಿ ಕಾರ್ಯದರ್ಶಿ ಶೈಲಜಾ, ಪಾಲಿಕೆ ಸಿವಿಲ್ ಕಾರ್ಯಪಾಲಕ ಅಭಿಯಂತರ ಶಿವನಗೌಡ ನಾಯಕ್ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News