ಜಾಮೀನು ಅರ್ಜಿ ವಾಪಸ್ ಪಡೆದು ಹೊಸ ಅರ್ಜಿ ಸಲ್ಲಿಸಿದ ಉಮರ್ ಖಾಲಿದ್ ; ಪ್ರಾಸಿಕ್ಯೂಶನ್‍ನಿಂದ ವಿಳಂಬ ನೀತಿ ಆರೋಪ

Update: 2021-09-06 09:57 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಯುಎಪಿಎ ಪ್ರಕರಣ ಎದುರಿಸುತ್ತಿರುವ  ಜೆಎನ್‍ಯುವಿನ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರು ತಮ್ಮ ಈ ಹಿಂದಿನ ಜಾಮೀನು ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಅದರ ಬದಲು ದಿಲ್ಲಿ ನ್ಯಾಯಾಲಯವೊಂದರಲ್ಲಿ ಇನ್ನೊಂದು ಜಾಮೀನು ಅರ್ಜಿ ಸಲ್ಲಿಸಿರುವ ಅವರು, ಪ್ರಾಸಿಕ್ಯೂಶನ್ ವಿಳಂಬ ತಂತ್ರಗಾರಿಕೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಜಾಮೀನು ಅರ್ಜಿ ಮೇಲಿನ ವಿಚಾರಣೆಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಶುಕ್ರವಾರಕ್ಕೆ ಮುಂದೂಡಿದ್ದಾರೆ ಹಾಗೂ ಹೊಸ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಪ್ರಾಸಿಕ್ಯೂಶನ್‍ಗೆ ಸೂಚಿಸಿದ್ದಾರೆ.

ಕಳೆದ ವಿಚಾರಣೆ ವೇಳೆ ಖಾಲಿದ್ ಪರ ವಾದ ಮಂಡಿಸಿದ ಅವರ ವಕೀಲ ತ್ರಿಲೋಕ್ ಪಾಯಸ್, ತಮ್ಮ ಕಕ್ಷಿಗಾರರನ್ನು ಯುಎಪಿಎ ಚಾರ್ಜ್ ಶೀಟ್‍ನಲ್ಲಿ ಕೋಮುವಾದಿ ಎಂಬಂತೆ ಬಿಂಬಿಸಲಾಗಿದೆ ಎಂದರಲ್ಲದೆ ವಾಸ್ತವವಾಗಿ ಈ ಚಾರ್ಜ್ ಶೀಟ್ ಸಿದ್ಧಪಡಿಸಿದ ಅಧಿಕಾರಿ ಕೋಮುವಾದಿ ಎಂದಿದ್ದರು.

ಮಾಜಿ ಕಾಂಗ್ರೆಸ್ ಕೌನ್ಸಿಲರ್ ಇಶ್ರತ್ ಜಹಾನ್ ಅವರ ಜಾಮೀನು ಅರ್ಜಿಯ ಸಮರ್ಥನೀಯತೆಯ ವಿಚಾರವನ್ನು ಪ್ರಾಸಿಕ್ಯೂಶನ್ ಎತ್ತಿದ ಹಿನ್ನೆಲೆಯಲ್ಲಿ ಖಾಲಿದ್ ಅವರ ಹೊಸ ಜಾಮೀನು ಅರ್ಜಿ ಬಂದಿದೆ.

ಇಶ್ರತ್ ಅವರ ಜಾಮೀನು ಅರ್ಜಿಯನ್ನು ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 349 ಅನ್ವಯ  ದಾಖಲಿಸಲಾಗಿದೆ ಹಾಗೂ ಇದನ್ನು ವಿಶೇಷ ನ್ಯಾಯಾಲಯ ಎತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಾಸಿಕ್ಯೂಶನ್ ವಾದಿಸಿತ್ತಲ್ಲದೆ ಈಗಿನ ಜಾಮೀನು ಅರ್ಜಿಯನ್ನು ವಾಪಸ್ ಪಡೆದು ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 437 ಅನ್ವಯ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸುವುದು ಅವರ ಮುಂದಿರುವ ಏಕೈಕ ಆಯ್ಕೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News