ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಎಚ್.ವಿಶ್ವನಾಥ್

Update: 2021-09-06 15:37 GMT

ಮೈಸೂರು,ಸೆ.6: ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದಿರುವ ಕೇಂದ್ರ  ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೆಂಬಲ ಸೂಚಿಸಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಕನೆಕ್ಟಿಂಗ್ ಫ್ಯಾಮಿಲಿಯಾಗಿತ್ತು. ಆದರೆ ಇದೀಗ ಬಸವರಾಜ ಬೊಮ್ಮಾಯಿ ಸರ್ಕಾರ ಕನೆಕ್ಟಿಂಗ್ ಪೀಪಲ್ ಆಗಿದೆ ಎಂದು  ಶ್ಲಾಘಿಸಿದರು.

ಮುಖ್ಯಮಂತ್ರಿಗಳು ಎಲ್ಲ ಖಾತೆಯನ್ನು ಹಂಚಿ ಮೇಲುಸ್ತುವಾರಿ ನೋಡಿಕೊಳ್ಳಬೇಕು.  ಬಸವರಾಜ ಬೊಮ್ಮಾಯಿ ಅವರು ಸಮಾಧಾನಕರ ವಾತಾವರಣದಲ್ಲಿ ತಮ್ಮ ಆಡಳಿತವನ್ನು ಆರಂಭಿಸಿದ್ದಾರೆ. ಮತ್ತೊಂದು ಭರವಸೆಯನ್ನು ನಾಡಿನಲ್ಲಿ ನೀಡುತ್ತಿದ್ದಾರೆ. ಇವರ ಬಗ್ಗೆ ಅಪಾರವಾಗಿ ನಂಬಿಕೆ ಭರವಸೆ, ನಿರೀಕ್ಷೆಗಳು ನಾಡಿನ ಜನತೆಗೆ ಇದೆ. ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ನೆರಳಲ್ಲ. ಅವರದ್ದೇ ಆದ ಸ್ವಂತಿಕೆಯಲ್ಲಿ ಕೆಲ ಮಾಡುತ್ತಾರೆ. ಅವರು ರಾಜ್ಯಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ. ಜನರ ಸುತ್ತ ಅಭಿವೃದ್ಧಿ ಸುತ್ತಬೇಕು, ಅಭಿವೃದ್ಧಿ ಸುತ್ತ ಜನ ಸುತ್ತಬಾರದು ಅನ್ನೋದನ್ನು ತೋರಿಸಿದ್ದಾರೆ ನನಗೆ ಅವರ ಮೇಲೆ ನಂಬಿಕೆ ಇದೆ ಎಂದರು.

ಯಾರು  ಪಕ್ಷದ ಅಧ್ಯಕ್ಷರಾಗಿರುತ್ತಾರೋ ಅವರದ್ದೇ ನಾಯಕತ್ವ ಇರುತ್ತದೆ. ಸಾಮೂಹಿಕ ನಾಯಕತ್ವ ಇದ್ದರೂ ಒಬ್ಬ ಮೇಟಿ ಬೇಕು. ಅದು ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಆಗಿದ್ದಾರೆ ಎಂದರು. ಇದೇ ವೇಳೆ ಸರ್ಕಾರಿ ಭೂ ಒತ್ತುವರಿಗೆ ಸರ್ವೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಶಾಸಕ ಸಾ.ರಾ ಮಹೇಶ್ ಹಾಗೂ ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿ ಚಿನ್ನ ಉಜ್ಜಿದಷ್ಟು ಹೊಳಪು ಬರುತ್ತದೆ.   ಮರು ಸರ್ವೇ ನಡೆಯಲಿ, ಸತ್ಯ ಹೊರಬರಲಿ. ಸಾ.ರಾ ಮಹೇಶ್ ಒತ್ತುವರಿ ಮಾಡಿಲ್ಲವಾದರೆ ಭಯ ಯಾಕೆ ?, ಒತ್ತುವರಿ ಮಾಡಿಕೊಂಡವರಿಗೆ ಸರ್ವೆಯ ಭಯವಿರುತ್ತದೆ. ಹಿಂದಿನ ಸರ್ವೆ ವರದಿ ಪ್ರಾಮಾಣಿಕವಾಗಿರಲಿಲ್ಲ. ಇದನ್ನು ನಾನು ಮೊದಲೇ ಹೇಳಿದ್ದೆ. ವರದಿ ಹೇಗೆ ನೀಡಿದರು ಅನ್ನೋದು ಜನರಿಗೂ ಗೊತ್ತಿದೆ. ಎಸ್.ಟಿ ಸೋಮಶೇಖರ್ ಸರ್ಕಾರದ ಭಾಗ. ಅವರು ಈ ರೀತಿ ಹೇಳಿಕೆ ನೀಡಬಾರದು. ಅಧಿಕಾರಿಗೆ ಸರ್ಕಾರವೇ ಅಧಿಕಾರ ನೀಡಿದೆ. ಆ ಅಧಿಕಾರ ಬಳಸಿ ಅವರು ಆದೇಶ ಮಾಡಿದ್ದಾರೆ. ಇದನ್ನು ವಿರೋಧಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕ್ರೆಡಿಟ್ ವಿಚಾರದ ಕುರಿತು ಮಾತನಾಡಿ ಸಂಸದ ಪ್ರತಾಪ್ ಸಿಂಹ ವಿರುದ್ಧ  ವಾಗ್ದಾಳಿ ನಡೆಸಿದ ಅವರು ಮುಂದೆ ಮೈಸೂರು ಕಟ್ಟಿಸಿದ್ದು ನಾನೇ ಅನ್ನುತ್ತಾರೆ. ಪ್ರತಾಪ್ ಸಿಂಹ ತಮ್ಮ ಸ್ಥಾನಕ್ಕೆ ಗೌರವವಿಟ್ಟು ಮಾತನಾಡಲಿ. ಅವರ ನಿನ್ನೆಯ ಪತ್ರವೂ ಸಂಸದರ ಸ್ಥಾನಕ್ಕೆ ಗೌರವ ತರುವ ಪತ್ರವಲ್ಲ. ಹಿಂದಿನ ಸರ್ಕಾರದಲ್ಲೇ ದಶಪಥ ರಸ್ತೆ ಯೋಜನೆಗೆ ದಾಖಲೆ ಇದೆ. ಹೀಗಾಗಿ ಯೋಜನೆ ತಮ್ಮದೇ ಅಂತ ಹೇಳಿಕೊಳ್ಳುವುದು ಸರಿಯಲ್ಲ ಎಂದು ಕಿಡಿಕಾರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News