×
Ad

ಎಲ್ಲ ಪಾಲಿಕೆಗಳ ಚುನಾವಣೆ ನಡೆಸಿ: ಮಾಜಿ ಸಂಸದ ವಿ.ಎಸ್. ಉಗ್ರಪ್ಪ

Update: 2021-09-06 22:48 IST

ಹೊಸಪೇಟೆ, ಸೆ.6: ರಾಜ್ಯ ವ್ಯಾಪಿಯಲ್ಲಿರುವ ಎಲ್ಲ ಮಹಾನಗರ ಪಾಲಿಕೆಗಳಿಗೆ ಮೇಯರ್, ಉಪಮೇಯರ್ ಚುನಾವಣೆ ತ್ವರಿತವಾಗಿ ನಡೆಸಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದೆ. ಕಲಬುರ್ಗಿಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಈ ಮೂರು ಹಾಗೂ ಬಳ್ಳಾರಿ ಪಾಲಿಕೆಗೆ ಕೂಡಲೇ ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದರು.

ಎಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದಿವೆ ಅಲ್ಲಿ ಆಪ್‍ರೇಷನ್ ಕಮಲ ನಡೆಸಿ, ಪ್ರಜಾಪ್ರಭುತ್ವ, ಸಂವಿಧಾನಕ್ಕೆ ದ್ರೋಹ ಬಗೆದು ಅಧಿಕಾರಕ್ಕೆ ಬರುವ ಕೆಲಸ ಮಾಡಬಾರದು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸ್ಪದ ಕೊಡಬಾರದು ಎಂದು ಒತ್ತಾಯಿಸಿದರು.

ಅಲ್ಲದೆ, ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆ ಮುಗಿದು ನಾಲ್ಕು ತಿಂಗಳಾಗಿದೆ. ಅಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಬಂದಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಇದುವರೆಗೆ ಅಲ್ಲಿ ಮೇಯರ್, ಉಪಮೇಯರ್ ಚುನಾವಣೆ ನಡೆಸಿಲ್ಲ. ಕೆಲ ದಿನಗಳ ಹಿಂದೆ ಮೈಸೂರು ಪಾಲಿಕೆಯ ಮೇಯರ್ ಚುನಾವಣೆ ನಡೆಸಿ, ಬಿಜೆಪಿ ಗದ್ದುಗೆ ಹಿಡಿದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News