×
Ad

ಬೆಂಗಳೂರು: ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ; ಗಣ್ಯರ ಮನೆ ಮುಂದೆ ತ್ಯಾಜ್ಯ ವಿಲೇವಾರಿ ಸ್ಥಗಿತ

Update: 2021-09-06 23:51 IST

ಬೆಂಗಳೂರು, ಸೆ.6: ತಮ್ಮ ಸೇವೆಯನ್ನು ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಬಿಬಿಎಂಪಿ ಪೌರಕಾರ್ಮಿಕರು, ಗಣ್ಯ ವ್ಯಕ್ತಿಗಳ ಮನೆ ಮುಂದೆಯೇ ತ್ಯಾಜ್ಯ ವಿಲೇವಾರಿ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.

ಸೋಮವಾರ ನಗರದ ಜಯಮಹಲ್ ರಸ್ತೆಯ ಸಚಿವರ ಅಧಿಕೃತ ನಿವಾಸ ಸೇರಿದಂತೆ ನಗರ ಭಾಗಶಃ ಪ್ರದೇಶದಲ್ಲಿ ಪೌರಕಾರ್ಮಿಕರು ಕಸ ವಿಲೇವಾರಿ ಮಾಡದೆ, ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಮಂಗಳವಾರವೂ ಮುಷ್ಕರ ಮುಂದುವರೆದರೆ ತ್ಯಾಜ್ಯ ಸಮಸ್ಯೆ ಉಲ್ಬಣಗೊಳ್ಳಲಿದೆ.

ಮುಷ್ಕರದ ಅಂಗವಾಗಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ನೇತೃತ್ವದಲ್ಲಿ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪೌರಕಾರ್ಮಿಕರು, ಖಾಯಂಉದ್ಯೋಗ ಸೇರಿ ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ನೇರ ವೇತನದಡಿಯಲ್ಲಿ ಮೇಸ್ತ್ರಿಗಳಿಗೆ 5 ಸಾವಿರ ರೂ. ಪ್ರೋತ್ಸಾಹಧನ ನೀಡುವುದಾಗಿ ಈ ಹಿಂದೆ ತಿಳಿಸಿದ್ದರು. ಆದರೆ, ಕೇವಲ 2 ಸಾವಿರ ರೂ. ಮಾತ್ರ ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಿಸಬೇಕು. ಇದರೊಂದಿಗೆ ಸ್ಯಾನಿಟರಿ ದಫೇದಾರ್ ಅವರಿಗೆ ಗುರುತಿನ ಚೀಟಿಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಹಲವು ವರ್ಷಗಳಿಂದ ದುಡಿಯುತ್ತಿರುವ 18 ಸಾವಿರ ಮಂದಿ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು. ಅಲ್ಲದೆ, ಪಾಲಿಕೆಯು ಈ ಹಿಂದೆ ಕೇವಲ 4 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಅಧಿಸೂಚನೆ ಹೊರಡಿಸಿದೆ. ಅದೇರೀತಿ, 18 ಸಾವಿರ ಮಂದಿಯನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು. ಇದು ಆಗದಿದ್ದರೆ, ಸಮಾನ ಕೆಲಸಕ್ಕೆ ಸಮಾನ ವೇತನ ಆದರೂ ನೀಡಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಸಂಕಷ್ಟ ಸಮಯದಲ್ಲೂ ಪೌರಕಾರ್ಮಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದುಡಿದಿದ್ದಾರೆ. ಆದರೆ, ಬಿಬಿಎಂಪಿಯನ್ನು ನಮ್ಮ ಹಿತಕಾಪಾಡುವಲ್ಲಿ ಸೋತಿದೆ. ಇಲ್ಲಿಯವರೆಗೂ ಮೃತ ಪೌರಕಾರ್ಮಿಕರಿಗೆ ಕೋವಿಡ್ ಪರಿಹಾರವೂ ಕೈಸೇರಿಲ್ಲ. ಹೀಗೆ, ಹಲವು ವರ್ಷಗಳಿಂದ ಪೌರಕಾರ್ಮಿಕರ ಸಮಸ್ಯೆಗಳು ಬಗೆಹರಿದಿಲ್ಲ. ಈ ಸಂಬಂಧ ಆಯುಕ್ತರಿಗೆ ಮನವಿ ಮಾಡಿದರೂ, ಬಾಯಿ ಮಾತಿನ ಭರವಸೆಗಳು ಸಿಕ್ಕಿವೆ. ಹೀಗಾಗಿ, ಹೋರಾಟ ನಡೆಸಲು ನಾವು ಮುಂದಾಗಿದ್ದೇವೆ ಎಂದು ಪೌರಕಾರ್ಮಿಕರು ನುಡಿದರು.

ಮುನ್ಸೂಚನೆ ಇಲ್ಲದೆ ಪ್ರತಿಭಟನೆ ಸರಿಯಲ್ಲ

ನ್ಯಾಯಯುತ ಬೇಡಿಕೆಗಳನ್ನು ಬಿಬಿಎಂಪಿ ಹಂತ ಹಂತವಾಗಿ ಈಡೇರಿಸಲು ಮುಂದಾಗಲಿದೆ. ಆದರೆ, ಯಾವುದೇ ಮುನ್ಸೂಚನೆ ಇಲ್ಲದೆ, ಏಕಾಏಕಿ ಈ ರೀತಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News