ರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿಲ್ಲ: ಸಚಿವ ಡಾ.ಕೆ.ಸುಧಾಕರ್

Update: 2021-09-07 14:56 GMT

ಬೆಂಗಳೂರು, ಸೆ.7: ಕೇರಳದಲ್ಲಿ ಕಂಡು ಬಂದಿರುವ ನಿಫಾ ವೈರಸ್ ಪ್ರಕರಣ, ನಮ್ಮ ರಾಜ್ಯದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಫಾ ಸೋಂಕಿಗೆ ಯಾವ ಲಸಿಕೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ. ರೋಗದ ಲಕ್ಷಣಗಳನ್ನು ಆಧಾರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಕೇರಳದಲ್ಲಿ ನಿಫಾ ಸೋಂಕಿನಿಂದಾಗಿ ಒಂದು ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯ ಸರಕಾರ ಸೋಂಕಿತರ ಮೇಲೆ ತೀವ್ರ ನಿಗಾ ವಹಿಸಿದೆ. ಅಲ್ಲಿನ ಸರಕಾರದ ಕ್ರಮಗಳು ನಮಗೆ ಸಮಾಧಾನ ತಂದಿದೆ ಎಂದು ಸುಧಾಕರ್ ಹೇಳಿದರು.

ಪ್ರಾಣಿಗಳು ಸೇವಿಸಿ ಬಿಟ್ಟ ಹಣನ್ನು ಮನುಷ್ಯ ತಿಂದರೆ ನಿಫಾ ಬರುತ್ತದೆ. ಕೇರಳದಲ್ಲಿ ಕಾಡು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಈ ಸೋಂಕು ಕಂಡು ಬಂದಿರಬಹುದು. ಕೇರಳದಲ್ಲಿ ಮೂರನೆ ಸಲ ನಿಫಾ ಸೋಂಕು ಕಂಡು ಬಂದಿದೆ ಎಂದು ಅವರು ಹೇಳಿದರು.

ಕೇರಳ ರಾಜ್ಯದ ಗಡಿ ಭಾಗದಲ್ಲಿ ನಿಫಾ ಕುರಿತು ಕಟ್ಟೆಚ್ಚರ ವಹಿಸಲಾಗಿದೆ. ಮತ್ತಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ನಿಫಾ ಸೋಂಕು ಪ್ರವೇಶಿಸದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News