ಮೈಸೂರು ವಿವಿ 101ನೇ ಘಟಿಕೋತ್ಸವ: ಗ್ರಾಮೀಣ ಪ್ರತಿಭೆ ಚೈತ್ರಾಗೆ 20 ಚಿನ್ನದ ಪದಕ
ಮೈಸೂರು,ಸೆ.7: ಶತಮಾನೋತ್ಸವ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವವು ಮಂಗಳವಾರ ಕ್ರಾಫರ್ಡ್ ಭವನದಲ್ಲಿ ನಡೆಯಿತು.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲರು ಹಾಗೂ ಕುಲಾಧಿಪತಿಗಳೂ ಆದ ಥಾವರ್ ಚಂದ್ ಗೆಹ್ಲೋಟ್ ಅವರು ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಸಾಯನ ಶಾಸ್ತ್ರವಿಭಾಗದ ಗೌರವ ಪ್ರಾಧ್ಯಾಪಕ ಡಾ.ಗೋವಿಂದರಾಜನ್ ಪದ್ಮನಾಭನ್ ಹಾಗೂ ಆಕ್ಸೆಲ್ ಇಂಡಿಯಾದ ಅಧ್ಯಕ್ಷ ಹಾಗೂ ರಾಜ್ಯ ಸರಕಾರದ ವಿಷನ್‌ಗ್ರೂಪ್ ಫಾರ್ ಸ್ಟಾರ್ಟ್ಸ್‌ಅಪ್‌ನ ಪ್ರಶಾಂತ್ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
20 ಚಿನ್ನ: ಉತ್ತರ ಕನ್ನಡ ಜಿಲ್ಲೆ ಶೀಗೆಹಳ್ಳಿ ಗ್ರಾಮದ ಚೈತ್ರಾ ನಾರಾಯಣ ಹೆಗಡೆ ಮೈಸೂರು ವಿವಿಯ 101 ನೇ ಘಟಿಕೋತ್ಸವದಲ್ಲಿ ರಸಾಯನ ವಿಜ್ಞಾನದಲ್ಲಿ 20 ಚಿನ್ನ ಹಾಗೂ 4 ನಗದು ಬಹುಮಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಗ್ರಾಮಾಂತರ ಪ್ರದೇಶದಿಂದ ಬಂದು ಮೈಸೂರು ವಿವಿಯಲ್ಲಿ ಎಂ.ಎಸ್ಸಿ ರಸಾಯನ ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಿರುವ ಚೈತ್ರಾ ನಾರಾಯಣ ಹೆಗಡೆ ಅವರಿಗೆ ಮಂಗಳವಾರ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಚಿನ್ನದ ಪದಕ ಪ್ರದಾನ ಮಾಡಿದರು.
ಸಾಂಕೇತಿಕವಾಗಿ ವಿವಿಧ ವಿಭಾಗಗಳಲ್ಲಿ ಅತಿಹೆಚ್ಚು ಪದಕಗಳನ್ನು ಪಡೆದ 30 ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ ಕ್ರಮವಾಗಿ ಪದವಿ ಪ್ರದಾನ ಮಾಡಲಾಯಿತು.
29,852 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಒಟ್ಟು 29,852 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗಿದ್ದು, ಅವರಲ್ಲಿ 20,118 (ಶೇ.67.39) ಮಹಿಳೆಯರು ಹಾಗೂ 9,734 (ಶೇ.32.60) ಪುರುಷರಿದ್ದರು. ವಿವಿಧ ವಿಷಯಗಳಲ್ಲಿ 244 ಅಭ್ಯರ್ಥಿಗಳಿಗೆ ಪಿಎಚ್‌ಡಿ ಪದವಿ ಪಡೆದವರಲ್ಲಿ, 98 (ಶೇ.40.16) ಮಹಿಳೆಯರು ಮತ್ತು 146 (ಶೇ.59.83) ಪುರುಷರು ಇದ್ದರು. ಒಟ್ಟಾರೆ 387 ಪದಕಗಳು ಹಾಗೂ 216 ಅಭ್ಯರ್ಥಿಗಳಿಗೆ 178 ದತ್ತಿ ಬಹುಮಾನಗಳನ್ನು ಪ್ರದಾನ ಮಾಡಲಾಯಿತು. ಇದೇ ವೇಳೆ 7,143 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 22,465 ಅಭ್ಯರ್ಥಿಗಳಿಗೆ ಸ್ನಾತಕಪದವಿಯನ್ನೂ ನೀಡಲಾಯಿತು.
ಎಸ್‌ಐಆರ್ ಮಹಾನಿರ್ದೇಶಕ ಪ್ರೊ.ಶೇಖರ್ ಸಿ.ಮಂಡೆ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಮೈವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಾನು ಹಳ್ಳಿಗಾಡಿನಿಂದ ಬಂದು ಚಿನ್ನದ ಪದಕ ಪಡೆದಿದ್ದೇನೆ. ಆದರೆ, 20 ಪದಕ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ, ಈ ಎಲ್ಲ ಪದಕಗಳು ನಮ್ಮ ತಂದೆ ನಾರಾಯಣ ಹೆಗಡೆ ಹಾಗೂ ತಾಯಿ ಸುಮಂಗಲಾ ಹೆಗಡೆ ಅವರಿಗೆ ಅರ್ಪಿಸುತ್ತೇನೆ. ನಾನು ಪಿ.ಜಿ.ಯಲ್ಲೇ ಇದ್ದುಕೊಂಡು ಓದಿದ್ದೇನೆ. ನಮ್ಮ ತಂದೆ, ತಾಯಿ ಮತ್ತು ಕುಟುಂಬದವರ ಪ್ರೋತ್ಸಾಹ ಮತ್ತು ನಮ್ಮ ಗುರುಗಳ ಸಹಕಾರದೊಂದಿಗೆ ಈ ಪದಕಗಳು ಲಭಿಸಿವೆ.
-ಚೈತ್ರಾ ನಾರಾಯಣ ಹೆಗಡೆ
ವಿದ್ಯಾರ್ಥಿನಿ ಮೀನಾಕ್ಷಿಗೆ 6 ಚಿನ್ನ
ಕುಗ್ರಾಮದಿಂದ ಬಂದು ಕೂಲಿ ಕೆಲಸ ಮಾಡುವವರ ಮಗಳು ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ದಲಿತ ವಿದ್ಯಾರ್ಥಿನಿ ಮೀನಾಕ್ಷಿ 6 ಚಿನ್ನ ಹಾಗೂ 3 ನಗದು ಬಹುಮಾನ ಪಡೆಯುವ ಮೂಲಕ ಸಾಧನೆಗೈದಿದ್ದಾರೆ.
ಬೀದರ್ ತಾಲೂಕಿನ ಶಾಪೂರ ಗ್ರಾಮದ ಭೀಮಾ ಶಂಕರ್ ಮತ್ತು ಶೋಭಾ ದಂಪತಿ ಪುತ್ರಿ ಮೀನಾಕ್ಷಿ ಬಡತನದಲ್ಲೇ ಬೆಳೆದು ದೊಡ್ಡ ಮಟ್ಟದ ಸಾಧನೆ ಮಾಡಿದ್ದು, ಐಎಎಸ್ ಮಾಡುವ ಆಸೆ ಹೊಂದಿರುವ ಇವರು ತಮ್ಮ ಊರಿಗೆ ಕೀರ್ತಿ ತಂದಿದ್ದಾರೆ.
ಮೈಸೂರು ವಿವಿಯ ಚಿನ್ನದ ರಾಣಿಯರು
ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಚಿನ್ನ ಬಾಚುವ ಮೂಲಕ ವಿದ್ಯಾರ್ಥಿನಿಯರೇ ಚಿನ್ನದ ರಾಣಿಯರಾಗಿದ್ದಾರೆ. ಸ್ನಾತಕೋತ್ತರ ಪದವಿಯ ರಸಾಯನಶಾಸ್ತ್ರ ವಿಭಾಗದಲ್ಲಿ ಚೈತ್ರಾ ನಾರಾಯಣ ಹೆಗಡೆ 20 ಚಿನ್ನ, 4 ನಗದು ಬಹುಮಾನ ಪಡೆಯುವ ಮೂಲಕ ಮೈಸೂರು ವಿವಿಗೆ ಪ್ರಥಮ ಸ್ಥಾನದಲ್ಲಿದ್ದಾರೆ.
ಗ್ರಾಮೀಣ ಪ್ರತಿಭೆ ಬಡತನದಲ್ಲೇ ವಿದ್ಯಾಭ್ಯಾಸ ಮಾಡಿ ಸರಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಾದಲಾಂಬಿಕೆ 10 ಚಿನ್ನ, 4 ನಗದು ಪಡೆದರೆ, ವಿಜ್ಞಾನ ವಿಭಾಗದಲ್ಲಿ ಹರ್ಷಿತ ಎನ್. 9 ಚಿನ್ನ ಪಡೆದಿದ್ಧಾರೆ. ಸಿಂಧೂ ನಾಗರಾಜ್ 7 ಚಿನ್ನ, 1 ನಗದು ಪಡೆದರೆ, ವಿದ್ಯಾಶ್ರೀ 7 ಚಿನ್ನ 2 ನಗದು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.