ಮುಖಾಮುಖಿಯಾಗಿ ನಿಂತಿರುವ ಸಂಸತ್ತು ಮತ್ತು ಸುಪ್ರೀಂ ಕೋರ್ಟ್

Update: 2021-09-08 06:37 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುಗಳನ್ನು ಕೇಂದ್ರ ಸರಕಾರ ಗೌರವಿಸುತ್ತಿಲ್ಲ ಎಂಬ ಅಸಮಾಧಾನವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಮತ್ತೆ ವ್ಯಕ್ತಪಡಿಸಿದೆ. ಈ ಪೀಠ ಕೇಂದ್ರ ಸರಕಾರದ ಜೊತೆ ಸಂಘರ್ಷಕ್ಕೆ ಇಳಿಯಲು ಬಯಸುವುದಿಲ್ಲ ಎಂದು ಹೇಳುತ್ತಿದ್ದರೂ ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳನ್ನು ಕಡೆಗಣಿಸಿ ನ್ಯಾಯ ಮಂಡಲಿ ಸುಧಾರಣೆ ಕಾಯ್ದೆ-2021 ಅಂಗೀಕರಿಸಲಾಗಿದೆ. ಇದರಿಂದ ನ್ಯಾಯಾಲಯಕ್ಕೆ ತೀವ್ರ ಅಸಮಾಧಾನ ಉಂಟಾಗಿದೆ. ''ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಗೌರವಿಸಲೇಬಾರದು ಎಂದು ಕೇಂದ್ರ ಸರಕಾರ ಪಣ ತೊಟ್ಟಂತೆ ಕಾಣುತ್ತದೆ.'' ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರ ಸರಕಾರದ ಕಾರ್ಯನಿರ್ವಹಣೆಯ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚಿನ ಕೆಲ ತಿಂಗಳಿನಿಂದ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ. ಕೋವಿಡ್ ಸೋಂಕಿನಿಂದ ಸಾವಿಗೀಡಾದವರಿಗೆ ನೀಡಲಾಗುವ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಮಾರ್ಗ ಸೂಚಿಗಳನ್ನು ರಚಿಸುವಲ್ಲಿ ಕೇಂದ್ರ ಸರಕಾರ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು.ಕಳೆದ ಮಾರ್ಚ್, ಎಪ್ರಿಲ್‌ನಲ್ಲಿ ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿ ಹಬ್ಬಿದಾಗ ಪ್ರಾಣವಾಯು ಇಲ್ಲದೆ ಅನೇಕ ರೋಗಿಗಳು ಅಸು ನೀಗಿದಾಗಲೂ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಕೇಂದ್ರದ ಕಿವಿ ಹಿಂಡಿತ್ತು. ಆದರೂ ಕೇಂದ್ರ ಸರಕಾರದ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ವಾಸ್ತವ ಸಂಗತಿ.

ಇದಿಷ್ಟೇ ಅಲ್ಲ, ನ್ಯಾಯ ಮಂಡಳಿ ಸುಧಾರಣಾ ವಿಧೇಯಕಕ್ಕೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ನೀಡಿದ್ದು ಸುಪ್ರೀಂ ಕೋರ್ಟ್ ಮತ್ತು ಸರಕಾರದ ನಡುವೆ ವೈಮನಸ್ಸು ಹೆಚ್ಚಾಗಲು ಕಾರಣವಾಗಿದೆ. ಸುಪ್ರೀಂ ಕೋರ್ಟ್ ಈ ಹಿಂದೆ ಅನೂರ್ಜಿತಗೊಳಿಸಿದ್ದ ಸುಗ್ರೀವಾಜ್ಞೆಯೊಂದರ ಕೆಲವು ಅಂಶಗಳಿಗೆ ಈ ವಿಧೇಯಕವು ಮತ್ತೆ ಜೀವ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ವಿಧೇಯಕದ ಔಚಿತ್ಯದ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಎತ್ತಿರುವ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಸೂಕ್ತವಾದ ಸಮಜಾಯಿಷಿ ನೀಡಿಲ್ಲ. ಸುಪ್ರೀಂ ಕೋರ್ಟ್ ಒಮ್ಮೆ ಅನೂರ್ಜಿತಗೊಳಿಸಿದ ಸುಗ್ರೀವಾಜ್ಞೆಗಳನ್ನು ಮತ್ತೆ ಹೊಸ ವಿಧೇಯಕದ ರೂಪದಲ್ಲಿ ಸಂಸತ್ತಿನಲ್ಲಿ ತಂದು ಅಂಗೀಕಾರ ಪಡೆಯುವುದು ನ್ಯಾಯಾಂಗದ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಎಂಬ ಅಸಮಾಧಾನ ಸರ್ವೋಚ್ಚ ನ್ಯಾಯಾಲಯಕ್ಕಿದೆ.

ನ್ಯಾಯಾಂಗದ ಸ್ವಾತಂತ್ರ್ಯ ಸಂವಿಧಾನದತ್ತವಾದುದು. ಸರಕಾರಕ್ಕೆ ಎಷ್ಟೇ ಬಹುಮತವಿದ್ದರೂ ಈ ಸಂವಿಧಾನಾತ್ಮಕ ಮೂಲ ಸ್ವಾತಂತ್ರ್ಯವನ್ನು ಬದಲಾಯಿಸಲು ಅವಕಾಶವಿಲ್ಲ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಈ ಕುರಿತು ಗೊಂದಲಗಳು ನಿವಾರಣೆಯಾಗಿವೆ. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಚ್ಯುತಿ ತರಲು ಅವಕಾಶವಿದ್ದ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಕೂಡ ಸುಪ್ರೀಂ ಕೋರ್ಟ್ ಈ ಹಿಂದೆ ರದ್ದು ಪಡಿಸಿದೆ.

ಸುಪ್ರೀಂ ಕೋರ್ಟ್‌ನಿಂದ ಸಂವಿಧಾನ ಬಾಹಿರ ಎಂದು ವ್ಯಾಖ್ಯಾನಿಸಲ್ಪಟ್ಟ ಅಂಶಗಳನ್ನು ಸಂಸತ್ತು ಅಂಗೀಕರಿಸುವುದು ಸರಿಯೇ ಎಂಬುದು ಈಗ ಚರ್ಚಾರ್ಹ ವಿಷಯ. ಆದರೆ ಇಂತಹ ವಿವಾದಾತ್ಮಕ ವಿಧೇಯಕವೊಂದಕ್ಕೆ ಅನುಮೋದನೆ ನೀಡುವುದು ಸಾಂವಿಧಾನಿಕ ನ್ಯಾಯಾಲಯವೊಂದರ ತೀರ್ಪನ್ನು ಕಡೆಗಣಿಸಿದಂತೆ ಆಗುವುದಿಲ್ಲವೇ?. ಇದು ಸಂವಿಧಾನದ ವಿಭಿನ್ನ ಅಂಗಗಳ ನಡುವೆ ವೈಷಮ್ಯ ಮತ್ತು ಅಪನಂಬಿಕೆಗೆ ಕಾರಣವಾಗುವುದಿಲ್ಲವೇ?

ನ್ಯಾಯಾಂಗ ಮತ್ತು ಶಾಸಕಾಂಗ ಸಂವಿಧಾನದ ಎರಡು ಮುಖ್ಯ ಆಧಾರ ಸ್ತಂಭಗಳು. ಇವುಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಕ್ಷೇಮ. ಇವೆರಡರಲ್ಲಿ ಯಾವುದು ಹೆಚ್ಚಲ್ಲ ಅಥವಾ ಕಡಿಮೆಯಲ್ಲ.ಜನತೆ ತಮಗಾಗಿ ತಾವು ರಚಿಸಿಕೊಂಡಿರುವ ಸಂವಿಧಾನದ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಎರಡರ ಹೊಣೆಗಾರಿಕೆಯಾಗಿದೆ. ಸಂಸತ್ತಿನ ಪರಮಾಧಿಕಾರದ ಬಗ್ಗೆ ಆಕ್ಷೇಪವಿಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯವು ಅನೂರ್ಜಿತಗೊಳಿಸಿರುವ ವಿಧೇಯಕವನ್ನು ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿರುವುದು ಏಕೆ ಎಂಬ ಸುಪ್ರೀಂ ಕೋರ್ಟ್‌ನ ಪ್ರಶ್ನೆಯನ್ನೂ ತಳ್ಳಿ ಹಾಕಲಾಗುವುದಿಲ್ಲ.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ನಿರ್ಲಕ್ಷಿಸಿ ಸಂಸತ್ತಿನಲ್ಲಿ ವಿಧೇಯಕವೊಂದು ಅಂಗೀಕಾರವಾಗುವುದಾದರೆ ಶಾಸನ ಬದ್ಧ ಆಡಳಿತ ಎಂಬ ಮಾತಿಗೆ ಅರ್ಥವೇನು?. ಇದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಸಂವಿಧಾನದ ಎರಡು ಪ್ರಮುಖ ಅಂಗಗಳ ನಡುವಿನ ಈ ಮುಖಾಮುಖಿ ಶೀತಲ ಸಮರ ಬೇಗ ಕೊನೆಗೊಳ್ಳಲಿ.

ಸುಪ್ರೀಂ ಕೋರ್ಟ್‌ನ ಆದೇಶವನ್ನು ಧಿಕ್ಕರಿಸಿ ಸಂಸತ್ತಿನಲ್ಲಿ ಇರುವ ಬಹುಮತದ ಬಲವನ್ನು ಬಳಸಿಕೊಂಡು ವಿಧೇಯಕವೊಂದನ್ನು ಪಾಸು ಮಾಡಿಕೊಳ್ಳುವ ಕೆಟ್ಟ ಪರಂಪರೆಗೆ ನಾಂದಿ ಹಾಡಿದರೆ ಆಗ ಕಾನೂನು ಬದ್ಧ ಆಡಳಿತಕ್ಕೆ ಅರ್ಥ ಉಳಿಯುವುದಿಲ್ಲ. ಇದರಿಂದ ಯಾವುದೇ ಕಾನೂನನ್ನು ಉಲ್ಲಂಘಿಸಲು ಸರಕಾರಕ್ಕೆ ಅವಕಾಶ ದೊರೆತಂತಾಗುತ್ತದೆ ಎಂಬ ಸುಪ್ರೀಂಕೋರ್ಟ್ ಆತಂಕವನ್ನು ತಳ್ಳಿ ಹಾಕಲು ಆಗುವುದಿಲ್ಲ. ಈ ವಿವಾದಾಸ್ಪದ ವಿಧೇಯಕವನ್ನು ಅ ಸಾಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಈ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ. ಯಾವುದೇ ತೀರ್ಪು ಬರಲಿ ಸಂವಿಧಾನಾತ್ಮಕ ಬಿಕ್ಕಟ್ಟಿಗೆ ಅವಕಾಶವಾಗದಂತೆ ಶಾಸಕಾಂಗ ಮತ್ತು ಕಾರ್ಯಾಂಗಗಳು ನೋಡಿಕೊಳ್ಳಬೇಕಾಗಿದೆ.

ಒಕ್ಕೂಟ ಸರಕಾರ ಇನ್ನಾದರೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ತತ್ವಗಳಲ್ಲಿ ನಂಬಿಕೆಯಿಟ್ಟು, ಸುಪ್ರೀಂ ಕೋರ್ಟ್ ಆದೇಶಗಳಿಗೆ ಬೆಲೆ ಕೊಡುವ ಮೂಲಕ ದೇಶದ ನ್ಯಾಯ ವ್ಯವಸ್ಥೆಗೆ ಗೌರವ ತರುವ ಪ್ರಯತ್ನ ಮಾಡಲಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News