ಫ್ರಾನ್ಸ್ ನಿಂದ ಜಪಾನ್ ನತ್ತ ಹೊರಟ ಪರಮಾಣು ಇಂಧನ ಹೊತ್ತ ನೌಕೆ‌

Update: 2021-09-08 16:55 GMT

ಪ್ಯಾರಿಸ್, ಸೆ.8: ಅತ್ಯಂತ ವಿಕಿರಣಶೀಲ ಪ್ಲುಟೋನಿಯಂ ಸೇರಿದಂತೆ ಪರಮಾಣು ಇಂಧನದ ಸರಕು ತುಂಬಿರುವ ಹಡಗೊಂದು ಫ್ರಾನ್ಸ್ ನ ಚೆರ್ಬಾರ್ಗ್ ಬಂದರಿನಿಂದ ಜಪಾನ್ ನತ್ತ ಪ್ರಯಾಣ ಬೆಳೆಸಿದೆ ಎಂದು ಪರಿಸರ ಸಂರಕ್ಷಣೆಗಾಗಿ ಅಭಿಯಾನ ನಡೆಸುತ್ತಿರುವ ಗ್ರೀನ್ ಪೀಸ್ ಸಂಘಟನೆ ಹೇಳಿದೆ.

 ಫ್ರಾನ್ಸ್ನಿಂದ ಜಪಾನ್ ಗೆ ರವಾನಿಸುತ್ತಿರುವ 7ನೇ ಪರಮಾಣು ಇಂಧನದ ಸರಕು ಇದಾಗಿದೆ. 2011ರ ಸುನಾಮಿ ಸಂದರ್ಭ ಫುಕುಷಿಮ ಪರಮಾಣು ಸ್ಥಾವರಕ್ಕೆ ಹಾನಿಯಾಗುವ ತನಕ, ದೇಶೀಯ ವಿದ್ಯುತ್ ಶಕ್ತಿಗೆ ಅಗತ್ಯವಿರುವ ಪರಮಾಣು ಇಂಧನದ ಮೂರನೇ ಒಂದರಷ್ಟನ್ನು ಜಪಾನ್ ಸ್ವಯಂ ಉತ್ಪಾದಿಸುತ್ತಿತ್ತು. ಸುನಾಮಿಗೂ ಮುನ್ನ ಜಪಾನ್ ನಲ್ಲಿ 54 ಪರಮಾಣು ರಿಯಾಕ್ಟರ್ ಗಳು ಕಾರ್ಯ ನಿರ್ವಹಿಸುತ್ತಿದ್ದರೆ 2021ರ ಮಾರ್ಚ್ ವೇಳೆ 9 ಪರಮಾಣು ರಿಯಾಕ್ಟರ್ಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

 ಸೂರ್ಯೋದಯಕ್ಕೂ ಮುನ್ನ ಫ್ರಾನ್ಸ್ ನ ಉತ್ತರದಲ್ಲಿರುವ ಚೆರ್ಬಾರ್ಗ್ ಪಟ್ಟಣದಿಂದ ಬಂದರಿನತ್ತ ಪರಮಾಣು ಸರಕು ಸಾಗಿಸುವ ಸಂದರ್ಭ ಹಲವು ಪೊಲೀಸ್ ವಾಹನಗಳ ಸಹಿತ ಬಿಗು ಭದ್ರತೆ ಒದಗಿಸಿರುವುದನ್ನು ಎಎಫ್ಪಿ ಸುದ್ಧಿಸಂಸ್ಥೆಯ ಫೋಟೋಗ್ರಾಫರ್ ಗುರುತಿಸಿದ್ದಾರೆ. ಬಳಿಕ ಗ್ರೀನ್ ಪೀಸ್ ಸಹಿತ ಪರಮಾಣು ವಿರೋಧಿ ಕಾರ್ಯಕರ್ತರು ರಸ್ತೆಯ ಮಧ್ಯೆ ನಿಂತು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮಿಕ್ಸೆಡ್ ಆಕ್ಸೈಡ್ ಎಂದು ಕರೆಯಲಾಗುವ ಈ ಪರಮಾಣು ಇಂಧನ ಅತ್ಯಂತ ಅಪಾಯಕಾರಿ ವಸ್ತುವಾಗಿದ್ದು ಇದನ್ನು ಅಪಾಯಕಾರಿ ತ್ಯಾಜ್ಯ ಎಂದು ಪರಿಗಣಿಸಬೇಕು ಮತ್ತು ದೇಶದಿಂದ ಹೊರಗೆ ಸಾಗಿಸಲು ಅವಕಾಶ ನೀಡಬಾರದು ಎಂದು ಗ್ರೀನ್ ಪೀಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News