ರೈತರ ಪಂಪ್‍ಸೆಟ್‍ಗಳಿಗೆ ಟಿಸಿ ಅಳವಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಆರೋಪ : ಇಬ್ಬರು ಆರೋಪಿಗಳ ಬಂಧನ

Update: 2021-09-08 18:12 GMT

ಚಿಕ್ಕಮಗಳೂರು, ಸೆ.8: ಮೆಸ್ಕಾಂ ಇಲಾಖೆ ನಕಲಿ ಲೋಗೋ, ನಕಲಿ ಚಲನ್‍ಗಳನ್ನು ಬಳಸಿಕೊಂಡು ರೈತರ ಪಂಪ್‍ಸೆಟ್‍ಗಳಿಗೆ ಟಿಸಿ ಮಂಜೂರು ಮಾಡಿಸಿಕೊಡುವುದಾಗಿ ಹೇಳಿ ಹಲವು ರೈತರಿಂದ ಹಣ ಪಡೆದು ವಂಚನೆ ಮಾಡಿದ್ದ ಘಟನೆ ಕಡೂರು ತಾಲೂಕಿನ ಚಿಕ್ಕಂಗಳ ಹಾಗೂ ಜಿ.ಕೊಪ್ಪಲು ಗ್ರಾಮದಲ್ಲಿ ವರದಿಯಾಗಿದ್ದು, ರೈತರು ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಂಗಳ ಹಾಗೂ ಜಿ.ಕೊಪ್ಪಲು ಗ್ರಾಮಗಳ ರೈತರ ಬಳಿಗೆ ಆಗಮಿಸಿದ ಆರೋಪಿಗಳು ಮೆಸ್ಕಾಂ ಇಲಾಖೆಯ ಲೋಗೋ, ಚಲನ್ ತೋರಿಸಿ ರೈತರ ಹೊಲದ ಪಂಪ್‍ಸೆಟ್‍ಗಳಿಗೆ ಕಡಿಮೆ ವೆಚ್ಚದಲ್ಲಿ ಟಿಸಿ ಅಳವಡಿಸಿಕೊಡುವುದಾಗಿ ಹೇಳಿ ನಂಬಿಸಿದ್ದರು. ಅಲ್ಲದೇ ಈ ಗ್ರಾಮಗಳ ಹಲವಾರು ರೈತರಿಂದ 3-4 ಸಾವಿರ ರೂ. ಹಣ ಪಡೆದು ಹೋಗಿದ್ದರು.

ಇದನ್ನು ನಂಬಿದ್ದ ರೈತರು ಕಡೂರು ಪಟ್ಟಣದ ಮೆಸ್ಕಾಂ ಕಚೇರಿಗೆ ಆಗಮಿಸಿ ತಮ್ಮ ಪಂಪ್‍ಸೆಟ್‍ಗಳಿಗೆ ಟಿಸಿ ಮಂಜೂರಾಗಿದ್ದು, ಟಿಸಿ ಅಳವಡಿಸಿಕೊಡಬೇಕೆಂದು ಆಗ್ರಹಿಸಿದ್ದರು. ಈ ವೇಳೆ ರೈತರು ಹಣ ಪಾವತಿಸಿದ್ದ ಮೆಸ್ಕಾಂ ಇಲಾಖೆಯ ನಕಲಿ ಚಲನ್‍ಗಳು ಸೇರಿ ನಕಲಿ ಮಂಜೂರಾತಿ ಆದೇಶ ನೀಡಿರುವ ದಾಖಲೆಗಳನ್ನು ತೋರಿಸಿದ್ದರು. ಇದನ್ನು ಪರಿಶೀಲಿಸಿದ ಮೆಸ್ಕಾಂ ಅಧಿಕಾರಿಗಳು ಈ ಚಲನ್‍ಗಳು ನಕಲಿ ಎಂದು ತಿಳಿಸಿ ಅಪರಿಚಿತರು ರೈತರಿಗೆ ವಂಚನೆ ಮಾಡಿರುವುದನ್ನು ಮನವರಿಕೆ ಮಾಡಿದ್ದರು. ಈ ಸಂಬಂಧ ರೈತರು ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳು ಕಡೂರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಬಳಿಕ ರೈತರಿಗೆ ವಂಚನೆ ಮಾಡಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಎಂ.ಎಚ್.ಅಕ್ಷಯ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದು, ಆರೋಪಿಗಳು ಇದೇ ರೀತಿ ತಾಲೂಕಿನಲ್ಲಿ ಸುಮಾರು 2 ಲಕ್ಷ ರೂ. ವಂಚನೆ ಮಾಡಿದ್ದರೆಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News