ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ: ಸಿದ್ದರಾಮಯ್ಯರ ಮೇಲೆ ಆರೋಪ ಹಾಸ್ಯಾಸ್ಪದ; ಡಾ.ಎಚ್.ಸಿ.ಮಹದೇವಪ್ಪ

Update: 2021-09-09 18:07 GMT

ಬೆಂಗಳೂರು, ಸೆ. 9: `ಸಾಮಾಜಿಕ, ಆರ್ಥಿಕ (ಜಾತಿ ಗಣತಿ)ಸಮೀಕ್ಷಾ ವರದಿಯನ್ನು ಸಿದ್ದಪಡಿಸಲು ಹಣಕಾಸನ್ನು ಒದಗಿಸಿ ದತ್ತಾಂಶವನ್ನು ಸಂಗ್ರಹಿಸಿ ಅಂತಿಮ ವರದಿ ಸಿದ್ದಪಡಿಸುವುದಕ್ಕೆ ಪೂರಕವಾಗಿ ಕೆಲಸ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಸಮೀಕ್ಷಾ ವರದಿಗೆ ಸಂಬಂಧಿಸಿದಂತೆ ಸರಕಾರದ ಮುಖ್ಯಸ್ಥರ ಜವಾಬ್ದಾರಿ ಹೊತ್ತಿರುವವರು ಸುಳ್ಳು ಮಾಹಿತಿಯನ್ನು ಹರಡುವಂತಹ ಬೇಜವಾಬ್ದಾರಿ ಕೆಲಸವನ್ನು ಮಾಡಬಾರದೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಹಿಂದುಳಿದ ಜನಾಂಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಉದ್ದೇಶದಿಂದ ರೂಪಿಸಲಾದ ಕಾಕಾ ಕಾಲೇಕರ್ ವರದಿ, ಮಂಡಲ್ ವರದಿ ಹಾಗೂ ಹಾವನೂರು ವರದಿಯನ್ನು ಜಾರಿಗೊಳಿಸುವಾಗ ಯಾರೆಲ್ಲಾ ಮತ್ತು ಯಾವ ಕಾರಣಕ್ಕೆ ನೆಪ ಹೇಳುತ್ತಿದ್ದರು ಎಂದು ಎಲ್ಲರಿಗೂ ತಿಳಿದಿದೆ' ಎಂದು ಟೀಕಿಸಿದ್ದಾರೆ.

`ಮಂಡಲ್ ವರದಿಯ ವಿರುದ್ಧ ಕಮಂಡಲ ಹಿಡಿದ ಕೆಟ್ಟ ಮನಸ್ಸುಗಳೇ ಈಗಲೂ ಕಾಂತರಾಜ್ ವರದಿ ಜಾರಿಗೆ ವಿರುದ್ಧವಾಗಿದೆ. ಅದರಲ್ಲೂ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ `ಜಾತಿ ಗಣತಿ'ಗೆ ಸಂಬಂಧಿಸಿದ ಕಾಂತರಾಜ್ ವರದಿಗೆ ಬೇಕಾದ ಸಂಬಂಧಿಸಿದ ದತ್ತಾಂಶವನ್ನು ಸಿದ್ಧಪಡಿಸಲಾಯಿತು. ಆದರೆ, ಆ ದತ್ತಾಂಶವನ್ನು ಸೂಕ್ತವಾಗಿ ವಿಶ್ಲೇಷಿಸಿ ವರದಿಯನ್ನು ಸಿದ್ಧಪಡಿಸುವ ವೇಳೆಗೆ ಕಾಂಗ್ರೆಸ್ ಸರಕಾರ ಬದಲಾಗಿ ನೇತೃತ್ವದ ಸಮ್ಮಿಶ್ರ ಸರಕಾರ ಬಂದಿತು. ಇದೀಗ ಬಹುಶಃ ಕಾಂತಾರಾಜ್ ಆಯೋಗದ ವರದಿಯ ಜಾರಿಯ ಬಗ್ಗೆ ಈಗ ಸುಳ್ಳು ಹೇಳುತ್ತಿರುವ ಇವರಿಗೂ ತಮ್ಮ ಅವಧಿಯಲ್ಲೇ ಆ ವರದಿಯನ್ನು ಸಿದ್ಧಪಡಿಸಿ ಜಾರಿಗೊಳಿಸಬಹುದಿತ್ತೆಂಬ ಸಂಗತಿಯು ಗೊತ್ತಿದ್ದರೂ ವರದಿ ಜಾರಿ ಮಾಡದೇ ಜನರಿಗೆ ತಪ್ಪು ಮಾಹಿತಿಯನ್ನು ನೀಡುವುದು ನಿಜಕ್ಕೂ ಬೇಜವ್ದಾರಿ ತನವಾಗಿದೆ' ಎಂದು ಡಾ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News