×
Ad

ಶವ ಸಂಸ್ಕಾರ ಭಾಗ್ಯ ನೀಡುವ ಸರಕಾರವಿರುವಾಗ ಇನ್ನೇನಾದಿತು?: ಕಾಂಗ್ರೆಸ್ ಆಕ್ರೋಶ

Update: 2021-09-10 18:50 IST
ಸಾಂದರ್ಭಿಕ ಚಿತ್ರ

ಬೆಂಗಳೂರು: 'ನರೇಗಾದಂತಹ ಅತ್ಯುನ್ನತ ಯೋಜನೆಯನ್ನು ಮೋದಿ ಅವರು ಕಾಂಗ್ರೆಸ್‍ನ ವೈಫಲ್ಯಗಳ ಸ್ಮಾರಕ ಎಂದು ಟೀಕಿಸಿದ್ದರು. ಆದರೆ ನರೇಗಾ ಕೂಲಿ ಕೊಡಲಾಗದ ಇವರ ಅಸಾಮರ್ಥ್ಯವೇ ನಿಜವಾದ ವೈಫಲ್ಯದ ಸ್ಮಾರಕವಾಗಿದೆ! ಲಾಕ್‍ಡೌನ್ ಸಂದರ್ಭದಲ್ಲಿ ಜನರಿಗೆ ಆಸರೆಯಾಗಿದ್ದ ರಾಜ್ಯದ ಪಾಲಿನ ನರೇಗಾ ಹಣ ಬಿಡುಗಡೆ ಮಾಡಿಲ್ಲ, 25 ಸಂಸದರೂ ಈ ಬಗ್ಗೆ ದನಿ ಎತ್ತಿಲ್ಲ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

"ಬಿಜೆಪಿ ಆಡಳಿತದಲ್ಲಿ ಜನರ ಮಾನಸಿಕ ಸ್ಥೈರ್ಯ ಕುಸಿದಿದೆ, ಲಾಕ್‍ಡೌನ್ ನಂತರ ಆತ್ಮಹತ್ಯಾ ಪ್ರಕರಣಗಳು ಹೆಚ್ಚಿದ್ದಕ್ಕೆ ಜನರು ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು ಮುಖ್ಯ ಕಾರಣ. ನಿರುದ್ಯೋಗ, ಖಿನ್ನತೆಯಿಂದ ಜನರು ಬದುಕಿನ ಭರವಸೆ ಕಳೆದುಕೊಂಡಿದ್ದಾರೆ. `ಹೋಗಿ ಸಾಯಿರಿ' ಎನ್ನುತ್ತಾ ಶವ ಸಂಸ್ಕಾರ ಭಾಗ್ಯ ನೀಡುವ ಸರಕಾರವಿರುವಾಗ ಇನ್ನೇನಾದಿತು?" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ..

"ಕೂಲಿ ಕೊಡಲು ಹಣವಿಲ್ಲದೆ ತಾನು ಬೆಳೆದ ಬೆಳೆಯನ್ನೇ ನೀಡುವ ಹಂತಕ್ಕೆ ಬಂದಿದ್ದಾನೆ ರೈತ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಯೋಜನೆ ರೂಪಿಸಬೇಕಾದ ಕೃಷಿ ಸಚಿವ ಹಾಗೂ ಬಿಜೆಪಿ ಸರಕಾರ ರೈತರನ್ನೇ ಹೇಡಿಗಳು ಎನ್ನುತ್ತಾ, ರೈತರ ಹೆಸರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಈ ಸರಕಾರ ಒಂದಾದರೂ ರೈತಸ್ನೇಹಿ ಯೋಜನೆ ರೂಪಿಸಿದೆಯೇ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

"ಕೇಂದ್ರ ಸರಕಾರ ಕೇವಲ 1.34 ಲಕ್ಷ ಕೋಟಿ ರೂ. ಆಯಿಲ್ ಬಾಂಡ್ ಹೆಸರು ಹೇಳಿಕೊಂಡು ದೇಶದ ಜನರಿಂದ 24 ಲಕ್ಷ ಕೋಟಿ ರೂ. ತೆರಿಗೆ ವಸೂಲಿ ಮಾಡಿದೆ. ಇದಕ್ಕಿಂತ ಸುಲಿಗೆ ಬೇಕಾ? ಜನರಿಗೆ ಎಲ್ಲ ಸತ್ಯಗಳೂ ಈಗ ಅರ್ಥವಾಗುತ್ತಿವೆ. ಪ್ರಧಾನಿ ಮೋದಿ ಮಾಧ್ಯಮದವರನ್ನೂ ಸೇರಿದಂತೆ ತಮ್ಮ ವಿರುದ್ಧ ದನಿ ಎತ್ತುವ ಎಲ್ಲರನ್ನೂ ಹೆದರಿಸುತ್ತಿದ್ದಾರೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News