"ದೇಶವೇ ಕೋವಿಡ್ ಭೀತಿಯಲ್ಲಿರುವಾಗ ಪ್ರಧಾನಿ ಹುಟ್ಟುಹಬ್ಬಕ್ಕೆ ಸಂಭ್ರಮಾಚರಣೆ ಯಾವ ಸಾಧನೆಗೆ?": ದಿನೇಶ್ ಗುಂಡೂರಾವ್

Update: 2021-09-10 14:18 GMT

ಬೆಂಗಳೂರು, ಸೆ. 10: `3 ವಾರ ಸಂಭ್ರಮಾಚರಣೆಯ ಮೂಲಕ ಪ್ರಧಾನಿಯವರ ಜನ್ಮದಿನವನ್ನು ಆಚರಿಸಲು ಬಿಜೆಪಿ ನಿರ್ಧರಿಸಿದೆ. ಅವರಿಗೆ ಆತ್ಮಸಾಕ್ಷಿ ಇದ್ದರೆ 3 ವಾರಗಳ ಸಂಭ್ರಮಾಚರಣೆ ಯಾವ ಸಾಧನೆಗೆ ಎಂದು ಜನರ ಮುಂದೆ ಹೇಳಲಿ. ದೇಶವೇ ಕೋವಿಡ್ ಸಂಕಷ್ಟದಲ್ಲಿದೆ. ಮೋದಿಯವರ ಎಡವಟ್ಟು ಆರ್ಥಿಕ ನೀತಿಗೆ ಜನ ಬಿಕಾರಿಯಾಗುತ್ತಿದ್ದಾರೆ. ಹೀಗಿರುವಾಗ ಸಂಭ್ರಮ ಯಾವುದಕ್ಕೆ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, "ದೇಶವೇ ಕೋವಿಡ್ 3ನೇ ಅಲೆಯ ಆತಂಕದಲ್ಲಿದೆ. ಅನೇಕ ರಾಜ್ಯಗಳು ಕೋವಿಡ್ ವಿರುದ್ಧ ಹೋರಾಡಲು ಹೆಣಗಾಡುತ್ತಿವೆ. ಸ್ವತಃ ಕೇಂದ್ರವೇ ಹಲವಾರು ನಿರ್ಬಂಧ ಹೇರಿದೆ. ಆದರೆ, ಮೋದಿಯವರ ಜನ್ಮದಿನದ ಪ್ರಯುಕ್ತ 3 ವಾರಗಳ ಸಂಭ್ರಮಾಚರಣೆಗೆ ಸರಕಾರದ ಯಾವುದೇ ನಿಯಮ ಅನ್ವಯವಾಗುವುದಿಲ್ಲ ಎಂದರೆ ಅರ್ಥವೇನು?
ಜನರಿಗೊಂದು ಕಾನೂನು, ಬಿಜೆಪಿಯವರಿಗೊಂದು ಕಾನೂನೆ?' ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

`ಸರಳತೆಯ ಬಗ್ಗೆ ಪ್ರಧಾನಿಯವರು ಭಾಷಣ ಬಿಗಿದರೆ ಸಾಲದು. ಅದು ಪ್ರಾಮಾಣಿಕವಾಗಿ ಆಚರಣೆಯಲ್ಲಿರಬೇಕು. ಕೋವಿಡ್ 2ನೆ ಅಲೆಯಲ್ಲಿ ಮೋದಿಯವರ ಆಡಳಿತ ದೇಶವನ್ನೇ ಸೂತಕದ ಮನೆ ಮಾಡಿದೆ. ಈ ಸೂತಕದಲ್ಲಿ ಬಿಜೆಪಿ ಸಂಭ್ರಮ ಆಚರಿಸಲು ಮುಂದಾಗಿರುವುದು ಕಿರಾತಕ ಮನಃಸ್ಥಿತಿ. ಮೋದಿಯವರಿಗೆ ಕನಿಷ್ಠ ಮಾನವೀಯತೆ ಇದ್ದರೆ ತಮ್ಮ ಜನ್ಮದಿನ ಸರಳವಾಗಿ ಆಚರಿಸಿಕೊಳ್ಳಲಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News