×
Ad

ಗಣೇಶ ವಿಸರ್ಜನೆ ವೇಳೆ ಎಸ್ಸೈಯನ್ನು ಎಳೆದಾಡಿದ ಸಂಘ ಪರಿವಾರದ ಕಾರ್ಯಕರ್ತರು: ವೀಡಿಯೊ ವೈರಲ್

Update: 2021-09-11 11:26 IST

ಸಕಲೇಶಪುರ, ಸೆ.11: ಗಣೇಶೋತ್ಸವದ ವೇಳೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡವೊಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಜೊತೆ ಅನುಚಿತವಾಗಿ ವರ್ತಿಸಿದ ಘಟನೆ ಸಕಲೇಶಪುರದಲ್ಲಿ ಶುಕ್ರವಾರ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಕಲೇಶಪುರದ ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ವತಿಯಿಂದ ಶುಕ್ರವಾರ ಗಣೇಶೋತ್ಸವ ಹಮ್ಮಿಕೊಳ್ಳಲಾಗಿತ್ತು. ಸಂಜೆಯ ವೇಳೆ ಗಣೇಶ ವಿಗ್ರಹದ ವಿಸರ್ಜನೆ ಸಂದರ್ಭ ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಂಡೆ, ವಾದ್ಯ ಸಹಿತ ಮೆರವಣಿಗೆ ಆಯೋಜಿಸಲಾಗಿತ್ತು. ತಂಡವೊಂದು ರಸ್ತೆಯಲ್ಲಿ ನೃತ್ಯ ಮಾಡುತ್ತಿತ್ತು. ಈ ವೇಳೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಕೋವಿಡ್ ಮಾರ್ಗಸೂಚನೆ ಪಾಲಿಸುವಂತೆ ಮೆರವಣಿಗೆ ನಿರತರಿಗೆ ತಿಳಿಹೇಳಲು ಮುಂದಾದ ಪಟ್ಟಣ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಚಿಂಚೋಳ್ಳಿ ಅವರ ಜೊತೆ ಬಜರಂಗ ದಳದ ರಾಜ್ಯ ಸಂಚಾಲಕರೆನ್ನಲಾದ ರಘು ಹಾಗೂ ಇತರ ಕಾರ್ಯಕರ್ತರು ಅನುಚಿತವಾಗಿ ವರ್ತಿಸಿದ್ದಾರೆ. ಇನ್ ಸ್ಪೆಕ್ಟರ್ ಜೊತೆ ವಾಗ್ವಾದಕ್ಕಿಳಿದ ತಂಡವು ಇನ್ ಸ್ಪೆಕ್ಟರ್ ರನ್ನು ನೂಕಾಟ-ತಳ್ಳಾಟ ನಡೆಸಿದ್ದು, ಅಕ್ಷರಶಃ ಎಳೆದಾಡಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.

ಇದಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಜನರು ಮೆರವಣಿಗೆಯ ಮೂಲಕ ಸರದಾರ್ ವಲ್ಲಬಾಯಿ ಪಟೇಲ್  ರಸ್ತೆಯಲ್ಲಿರುವ ಸಂಘಟನೆಯ ಕಚೇರಿಯ ಮುಂಭಾಗ ಗಣಪತಿ ಪ್ರತಿಷ್ಠಾಪನೆ ಮಾಡಿದರು.

ಸಂಘ ಪರಿವಾರದ ಈ ಗೂಂಡಾವೃತ್ತಿಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. 

ಘಟನೆಗೆ ಸಂಬಂಧಿಸಿ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News