ಇಂತಹ ದುಸ್ಸಾಹಸ ಮಾಡುವ ಮೊದಲು ಸರಕಾರಕ್ಕೆ ಹಿಂದುತ್ವ ರಕ್ಷಣೆಯ ನೆ‌ನಪಾಗಲಿಲ್ಲವೇ?: ಸಿದ್ದರಾಮಯ್ಯ ಪ್ರಶ್ನೆ

Update: 2021-09-11 12:27 GMT

ಬೆಂಗಳೂರು: ಹಿಂದೂ ಧರ್ಮದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ ಬಿಜೆಪಿಗೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆ‌ನಪಾಗಲಿಲ್ಲವೇ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ಈ ಕುರಿತು ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಟ್ವೀಟ್ ಮಾಡಿರುವ ಅವರು, 'ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿಹಾಕಿರುವುದು ಖಂಡನೀಯ ಕೃತ್ಯ. ಇದೊಂದು ಧರ್ಮಸೂಕ್ಷ್ಮ ವಿಚಾರವಾಗಿದ್ದು ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಸರಕಾರ ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು' ಎಂದಿದ್ದಾರೆ. 

'ನ್ಯಾಯಾಲಯದ ಆದೇಶವಿದ್ದರೂ ಅದ‌ನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸುವ ಮುನ್ನ ಜಿಲ್ಲಾಡಳಿತ ಪರಿಣಾಮದ ಬಗ್ಗೆ ಯೋಚನೆ ಮಾಡಬೇಕಾಗಿತ್ತು. ದೇವಸ್ಥಾನ ಕೆಡವಿ ಹಾಕಿದ ಘಟನೆ ಬಗ್ಗೆ ಮುಖ್ಯಮಂತ್ರಿಯವರು ನಿಷ್ಪಕ್ಷಪಾತ ತನಿಖೆ‌ ನಡೆಸಿ‌ ಕಾರಣಕರ್ತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಹೊಸ ನಿವೇಶನ ಮಂಜೂರು ಮಾಡಿ ಸರ್ವರನ್ನೂ ವಿಶ್ವಾಸಕ್ಕೆ ಪಡೆದು ನೂತನ ದೇವಸ್ಥಾನವನ್ನು ರಾಜ್ಯ ಸರ್ಕಾರವೇ ನಿರ್ಮಿಸಿಕೊಡಬೇಕು' ಎಂದು ಒತ್ತಾಯಿಸಿದ್ದಾರೆ. 

ನಂಜನಗೂಡಿನಲ್ಲಿ  ಪುರಾತನ ದೇಗುಲವನ್ನು ಅಧಿಕಾರಿಗಳು ರಾತ್ರೋ ರಾತ್ರಿ ನೆಲಸಮಗೊಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News