ಎಚ್ ಡಿಕೆ , ಸಚಿವ ಆರ್. ಅಶೋಕ್ ಭೇಟಿ

Update: 2021-09-11 13:35 GMT

ರಾಮನಗರ: ಕಲಬುರಗಿ ಪಾಲಿಕೆಯ ಮೇಯರ್ ಆಯ್ಕೆ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿದ್ದು, ಈ ಮಧ್ಯೆ ಕಂದಾಯ ಸಚಿವ ಆರ್. ಅಶೋಕ್ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. 

ಈ ಕುರಿತು ತಮ್ಮ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಕುಮಾರಸ್ವಾಮಿ  ''ಸಚಿವ ಆರ್.ಅಶೋಕ್ ಅವರು ನನ್ನ ತೋಟದ ಮನೆಯಲ್ಲಿ ಭೇಟಿಯಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಕಲಾಪದ ಬಗ್ಗೆಯೂ ಅವರು ಸಮಾಲೋಚನೆ ನಡೆಸಿದ್ದಾರೆ'' ಎಂದಿದ್ದಾರೆ. 

''ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಅಲ್ಲಿ, ನಮ್ಮ ಶಾಸಕರ ಜತೆ ಎಲ್ಲ ಬೆಳವಣೆಗಗಳ ಬಗ್ಗೆ ಚರ್ಚಿಸಿದ ನಂತರ ಪಕ್ಷದ ಅಭಿಪ್ರಾಯವನ್ನು ತಿಳಿಸಲಾಗುವುದು ಎಂದು ಅವರಿಗೆ ಹೇಳಿದ್ದೇನೆ'' ಎಂದು ತಿಳಿಸಿದ್ದಾರೆ.

''ಪ್ರಸ್ತುತ, ರಾಜ್ಯದ ರೈತಾಪಿ ಜನ ಎದುರಿಸುತ್ತಿರವ ಸಮಸ್ಯೆಗಳೂ ಸೇರಿದಂತೆ ರಾಜ್ಯ ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೇನೆ'' ಎಂದು ಹೇಳಿದ್ದಾರೆ.

ಈ ವೇಳೆ ಶಾಸಕ  ಸಾ.ರಾ.ಮಹೇಶ್  ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News