ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಲ್ಯಾಬ್ ಉಪಕರಣ ಖರೀದಿಯಲ್ಲಿ ಅಕ್ರಮ ಆರೋಪ; ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ

Update: 2021-09-11 13:37 GMT

ಬೆಂಗಳೂರು, ಸೆ. 11: `ಉನ್ನತ ಶಿಕ್ಷಣ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ಕೌಶಲ್ಯಾಭಿವೃದ್ಧಿ ಕೇಂದ್ರದ ಲ್ಯಾಬ್ ಉಪಕರಣ ಖರೀದಿಯಲ್ಲಿ ಇಲಾಖೆಯ ಅಧಿಕಾರಿಗಳು ಅಕ್ರಮ ಟೆಂಡರ್ ನಡೆಸಿದ್ದು, ಸುಮಾರು 34 ಕೋಟಿ ರೂ.ಕಿಕ್ ಬ್ಯಾಕ್ ಪಡೆಯಲಾಗಿದೆ. ಇದೆಲ್ಲವೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಅವರ ಅನುಮತಿ ಮೇರೆಗೆ ನಡೆದಿದ್ದು, ಈ ವಿಚಾರವಾಗಿ ಸಿಬಿಐ ತನಿಖೆ ನಡೆಸಬೇಕು' ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಶನಿವಾರ ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಉನ್ನತ ಶಿಕ್ಷಣ ಇಲಾಖೆಯಲ್ಲಿನ ಅಕ್ರಮ ಟೆಂಡರ್ ಗಳನ್ನು ಬಯಲು ಮಾಡಿದರು. ಪ್ರಧಾನಿ ಮೋದಿ ಅವರು `ನಾ ಖಾವೂಂಗಾ, ನಾ ಖಾನೇ ದೂಂಗಾ' (ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ) ಎನ್ನುತ್ತಾ ನಾನು ಈ ದೇಶದ ಕಾವಲುಗಾರ ಎಂದು ಹೇಳಿಕೊಳ್ಳುತ್ತಾರೆ. ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ ಸರಕಾರಿ ಟೂಲ್ ರೂಮ್ ಅಂಡ್ ಟ್ರೇನಿಂಗ್ ಸೆಂಟರ್‍ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಐಆರ್‍ಪಿಎಸ್ ಅಧಿಕಾರಿ ಎಚ್.ರಾಘವೇಂದ್ರ, ಆಡಳಿತ ವ್ಯವಸ್ಥಾಪಕ ಮುನೀರ್ ಅಹ್ಮದ್, ಖರೀದಿ ಅಧಿಕಾರಿ ರಾಜಕುಮಾರ್ ಅವರು ಅಕ್ರಮ ಟೆಂಡರ್ ಮೂಲಕ ಲೂಟಿ ಮಾಡುತ್ತಿದ್ದಾರೆ' ಎಂದು ದೂರಿದರು.

`ಐಆರ್‍ಪಿಎಸ್ ಅಧಿಕಾರಿ ಕುಣಿಗಲ್ ಮೂಲದವರಾಗಿದ್ದು, ಅವರದೇ ಸಮಾಜದ ಸಂಬಂಧಿಕರಿರುವ ಮಂತ್ರಿಗಳ ಶಿಫಾರಸ್ಸಿನ ಮೇರೆಗೆ ಈ ಇಲಾಖೆಗೆ ಭಡ್ತಿ ಪಡೆದು ಬಂದಿದ್ದಾರೆ. ಬಹುತೇಕ ಇಲಾಖೆಗಳಲ್ಲಿ ಇಂತಹ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ನೇಮಿಸುತ್ತಾರೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಈ ರೀತಿ ರೈಲ್ವೆ ಇಲಾಖೆಗೆ ಸೇರಿದ ಐಆರ್‍ಪಿಎಸ್ ಅಧಿಕಾರಿಯನ್ನು ಇಲಾಖೆಗೆ ಈ ರೀತಿ ನೇಮಕ ಮಾಡಲಾಗಿದೆ. ಇವರ ಅವಧಿಯಲ್ಲಿ ಈ ತರಬೇತಿ ಕೇಂದ್ರದ ಲ್ಯಾಬ್‍ಗಳಿಗೆ ತರಿಸಲಾಗಿರುವ ಉತ್ಪನ್ನಗಳನ್ನು ಯಾವ ಡಿಪ್ಲೊಮೋ ಅಥವಾ ಇಂಜಿನಿಯರಿಂಗ್ ಕಾಲೇಜುಗಳಲ್ಲೂ ಬಳಸುವುದಿಲ್ಲ. ಅವುಗಳ ಅವಶ್ಯಕತೆ ಇಲ್ಲದಿದ್ದರೂ ವಿನಾಕಾರಣ ಈ ಉತ್ಪನ್ನಗಳನ್ನು ಖರೀದಿಸಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆಗೆ ಕೇಂದ್ರ ಹಾಗೂ ರಾಜ್ಯದಿಂದ 200 ಕೋಟಿ ರೂ.ಗಳಷ್ಟು ಅನುದಾನ ನೀಡಲಾಗಿದೆ. ಇದು ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈ ಇಲಾಖೆ ಮಂತ್ರಿಗಳು ಡಾ.ಅಶ್ವಥ್ ನಾರಾಯಣ್ ಅವರು. ರಾಜ್ಯದಲ್ಲಿ ಸುಮಾರು 25 ಕೌಶಲ್ಯ ತರಬೇತಿ ಕೇಂದ್ರಗಳಿದ್ದು, ಈಗ ಹೊಸದಾಗಿ ಅಶ್ವಥ್ ನಾರಾಯಣ್ ಅವರ ಹುಟ್ಟೂರಾಗಿರುವ ಚಿಕ್ಕಕಲ್ಯದಲ್ಲಿ ಹಾಗೂ ದೇವನಹಳ್ಳಿಯಲ್ಲಿ ಈ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಎಲ್ಲ ಕೇಂದ್ರಗಳ ಪೈಕಿ ರಾಜಾಜಿನಗರ ಕೇಂದ್ರದಲ್ಲಿ 500 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ' ಎಂದು ಮಾಹಿತಿ ನೀಡಿದರು.

`ಮೇಲ್ಕಂಡ ಮೂರು ಅಧಿಕಾರಿಗಳು ಸಂಬಂಧಪಟ್ಟ ಮಂತ್ರಿಗಳ ಗಮನದಲ್ಲೇ 8 ಟೆಂಡರ್ ಕರೆದಿದ್ದಾರೆ. ಇದರ ಒಟ್ಟಾರೆ ಮೊತ್ತ 61.52,04,747 ರೂಪಾಯಿ. ಇನ್ನು 40 ಕೋಟಿ ರೂ.ಮೌಲ್ಯದ ಉಳಿದ ಎರಡು ಟೆಂಡರ್ ಪ್ರಕ್ರಿಯೆಯೂ ಮುಕ್ತಾಯ ಹಂತದಲ್ಲಿದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡುತ್ತೇವೆ. ಈಗ ಕರೆದಿರುವ ಟೆಂಡರ್ ಪೈಕಿ ಮೊದಲನೇ ಟೆಂಡರ್‍ನಲ್ಲಿ ಖರೀದಿ ಮೊತ್ತ 9,47,98,000 ರೂ., ಆದರೆ ಇದರ ಮಾರುಕಟ್ಟೆ ಮೊತ್ತ 4.50 ಕೋಟಿ ರೂ.ಗಳು. ಎರಡನೇ ಟೆಂಡರ್‍ನಲ್ಲಿ 9.20 ಕೋಟಿ ರೂ.ಖರೀದಿ ಮೊತ್ತವಿದ್ದು, ಅದರ ಮಾರುಕಟ್ಟೆ ಮೌಲ್ಯ 4 ಕೋಟಿ ರೂ. ಮೂರನೇ ಬಿಡ್‍ನಲ್ಲಿ 17.82 ಕೋಟಿ ರೂ.ಖರೀದಿ ಮೊತ್ತವಿದ್ದು, ಅವುಗಳ ಮಾರುಕಟ್ಟೆ ಮೊತ್ತ 8.50 ಕೋಟಿ ರೂ.ಗಳು. ನಾಲ್ಕನೇ ಬಿಡ್‍ನಲ್ಲಿ 2.80 ಕೋಟಿ ರೂ.ಖರೀದಿ ಮೊತ್ತವಿದ್ದು, ಅದರ ಮಾರುಕಟ್ಟೆ ಮೌಲ್ಯ 1.25 ಕೋಟಿ ರೂ.ಮಾತ್ರ.

ಐದನೇ ಬಿಡ್‍ನಲ್ಲಿ ಬೆಳಗಾವಿ ಸ್ಮಾರ್ಟ್‍ಸಿಟಿಗೆ ಸಂಬಂಧಿಸಿದ ಲ್ಯಾಬ್‍ಗೆ 1.03 ಕೋಟಿ ರೂ.ಖರೀದಿ ಮೊತ್ತವಿದೆ. ಮಾರುಕಟ್ಟೆಯಲ್ಲಿ ಅದರ ಮೌಲ್ಯ 40 ಲಕ್ಷ ರೂ. ಆರನೇ ಟೆಂಡರ್‍ನಲ್ಲಿ 4.86 ಕೋಟಿ ರೂ.ಮೊತ್ತ ನಿಗದಿ ಮಾಡಿದ್ದು, ಮಾರುಕಟ್ಟೆ ಮೊತ್ತ 2 ಕೋಟಿ ರೂ. ಏಳನೇ ಟೆಂಡರ್‍ನಲ್ಲಿ 6.93 ಕೋಟಿ ರೂ.ನಿಗದಿ ಮಾಡಿದ್ದು, ಇದರ ಮಾರುಕಟ್ಟೆ ಮೊತ್ತ ಕೇವಲ 3 ಕೋಟಿ ರೂ. ಎಂಟನೇ ಬಿಡ್‍ನಲ್ಲಿ 9.83 ಕೋಟಿ ರೂ.ನಿಗದಿ ಮಾಡಲಾಗಿದ್ದು, ಇದರ ಉತ್ಪನ್ನಗಳ ಮಾರುಕಟ್ಟೆ ಮೌಲ್ಯ 3.15 ಕೋಟಿ ರೂ. ಒಟ್ಟಾರೆ ಈ ಎಲ್ಲ ಬಿಡ್‍ಗಳಿಂದ ಸರಕಾರ 61.52 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದ್ದು, ಅದರ ಮಾರುಕಟ್ಟೆ ಮೊತ್ತ 27.15 ಕೋಟಿ ರೂ.ಮಾತ್ರ. ಅವರಿಗೆ ಕಿಕ್‍ಬ್ಯಾಕ್ ಹೋಗಿರುವುದು 34.37 ಕೋಟಿ ರೂ.ಗಳು ಎಂದು ಆಪಾದಿಸಿದರು.

`ಉಲ್ಲೇಖಿತ ಈ 8 ಟೆಂಡರ್‍ಗಳಲ್ಲಿ ಬಹುತೇಕ ಬಿಡ್‍ಗಳನ್ನು ಅಕ್ವಾ ಟೆಕ್ವಿಪ್ಮೆಂಟ್ಸ್‍ಗೆ ನೀಡಲಾಗಿದೆ. ಬಿಡ್ ನಂ.7 ಅನ್ನು ರವಿತೇಜ ಎಲೆಕ್ಟೋಸಿಸ್ಟಮ್ಸ್‍ಗೆ ನೀಡಲಾಗಿದ್ದು, ಇದು ಅಕ್ವಾ ಟೆಕ್ವಿಪ್ಮೆಂಟ್ಸ್‍ನ ಸ್ನೇಹಿತರಾಗಿದ್ದಾರೆ. ಇನ್ನು ಮೊದಲ ಬಿಡ್‍ಅನ್ನು ಲಾರೆನ್ಸ್ ಅಂಡ್ ಮೇಯೋ ಅವರಿಗೆ ನೀಡಿದ್ದಾರೆ. ಈ ಟೆಂಡರ್‍ನಲ್ಲಿ ಭಾಗಿಯಾಗಿರುವವರು ಉತ್ಪನ್ನ ತಯಾರಕರಲ್ಲ. ಈ ಉತ್ಪನ್ನ ಸರಬರಾಜು ಮಾಡುವ ಏಜೆನ್ಸಿಗಳೂ ಅಲ್ಲ. ಈ ಟೆಂಡರ್ ಅನ್ನು ಇವರಿಗೆ ನೀಡಬೇಕು ಎಂಬ ಉದ್ದೇಶದಿಂದ ಟೆಂಡರ್ ಕರೆಯುವಾಗ ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಬೇರೆಯವರಿಗೆ ಟೆಂಡರ್‍ನಲ್ಲಿ ಅವಕಾಶ ಸಿಗಬಾರದು ಎಂದು ಸಚಿವರ ರಕ್ಷಣೆಯಲ್ಲಿ ಈ ಮೂವರು ಅಧಿಕಾರಿಗಳು ಅಕ್ರಮ ಟೆಂಡರ್ ನಡೆಸಿದ್ದಾರೆ' ಎಂದು ಉಗ್ರಪ್ಪ ಆರೋಪಿಸಿದರು.

`ಪಾರದರ್ಶಕ ಟೆಂಡರ್ ಕಾಯ್ದೆ ಪ್ರಕಾರ ಯಾವುದೇ ಟೆಂಡರ್ 1 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ್ದಾಗಿದ್ದರೆ ಬಿಡ್ ಪೂರ್ವಭಾವಿ ಸಭೆ ಕರೆಯಬೇಕು. ಈ 8 ಟೆಂಡರ್ ಕರೆಯುವ ಸಂದರ್ಭದಲ್ಲಿ ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ. ಟೆಂಡರ್ ದಾಖಲೆಗಳಲ್ಲೂ ಈ ಸಭೆಯ ಬಗ್ಗೆ ಮಾಹಿತಿ ಇಲ್ಲ. ಇದರ ಜತೆಗೆ ಸಿಎಂಸಿ ಯಂತ್ರಗಳನ್ನು 2019ರಲ್ಲಿ 28.98 ಲಕ್ಷ ರೂ.ಗೆ ಒಂದು ಯಂತ್ರ ಎಂಬಂತೆ ಒಟ್ಟು 5 ಯಂತ್ರಗಳನ್ನು ಖರೀದಿ ಮಾಡಲಾಗುತ್ತದೆ. 2021ರಲ್ಲಿ ಇದೇ ಯಂತ್ರಗಳನ್ನು 31.27 ಲಕ್ಷ ರೂ.ಮೊತ್ತದಂತೆ 6 ಯಂತ್ರಗಳನ್ನು ಖರೀದಿ ಮಾಡಲಾಗುತ್ತದೆ. ಅದೇ ಯಂತ್ರಗಳನ್ನು ಮಾರ್ಚ್‍ನಲ್ಲಿ 99.12 ಲಕ್ಷ ರೂ.ನಂತೆ 4 ಯಂತ್ರಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿಗೆ ಒಂದು ಯಂತ್ರವನ್ನು ಮೂರುಪಟ್ಟು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಲಾಗಿದೆ' ಎಂದು ಅವರು ವಿವರಿಸಿದರು.

`ಪಾರದರ್ಶಕ ಕಾಯ್ದೆ ಪ್ರಕಾರ ಬಿಡ್‍ನಲ್ಲಿ ಒಂದು ಅಥವಾ ಎರಡು ಕಂಪೆನಿಗಳು ಮಾತ್ರ ಭಾಗವಹಿಸಿದ್ದರೆ, ಆ ಟೆಂಡರ್ ರದ್ದುಗೊಳಿಸಿ ಮರುಟೆಂಡರ್ ಕರೆಯಬೇಕು ಎಂದು ಕಾನೂನು ಹೇಳುತ್ತದೆ. ದುರಾದೃಷ್ಟವಶಾತ್ 8 ಟೆಂಡರ್‍ಗಳಲ್ಲಿ ಕೇವಲ 2 ಕಂಪೆನಿಗಳು ಮಾತ್ರ ಭಾಗವಹಿಸಿದ್ದು, ಇವುಗಳಲ್ಲಿ ಯಾವ ಟೆಂಡರ್ ಅನ್ನು ಮರುಟೆಂಡರ್ ಕರೆಯಲಿಲ್ಲ. ಈ ಎರಡು ಕಂಪೆನಿಗಳು ಮಾತ್ರ ಭಾಗವಹಿಸುವಂತೆ ನೋಡಿಕೊಳ್ಳುತ್ತಾರೆ. ಹೀಗೆ ಮೂವರು ಅಧಿಕಾರಿಗಳು ರಾಜ್ಯ ಸರಕಾರದ ಬೊಕ್ಕಸವನ್ನು ಲೂಟಿ ಮಾಡಿದ್ದು, ಈ ತಿಮಿಂಗಲಗಳನ್ನು ಪೆÇೀಷಣೆ ಮಾಡುತ್ತಿರುವುದು ಸಚಿವ ಡಾ.ಅಶ್ವಥ್ ನಾರಾಯಣ್ ಅವರು. ಅಶ್ವಥ್ ನಾರಾಯಣ ಅವರೇ ನಿಮಗೂ ಈ ಅಧಿಕಾರಿ ರಘುನಾಥ್ ಅವರಿಗೂ ಇರುವ ಸಂಬಂಧ ಏನು? ಈ ಅವ್ಯವಹಾರದಲ್ಲಿ ನಿಮ್ಮ ಪಾಲೆಷ್ಟು? ಈ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ?' ಎಂದು ಉಗ್ರಪ್ಪ ಪ್ರಶ್ನಿಸಿದರು.

`ರಾಜ್ಯದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ ಹೇಗೆಲ್ಲಾ ಲೂಟಿ ಮಾಡಲಾಗುತ್ತಿದೆ ಎಂಬುದಕ್ಕೆ ಇದು ಕೇವಲ ಸ್ಯಾಂಪಲ್ ಅಷ್ಟೇ. ಈ ಸರಕಾರಕ್ಕೆ ನಿಜವಾಗಿಯೂ ಬದ್ಧತೆ ಇದ್ದರೆ, ಈ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು. ಇದರಲ್ಲಿ ಅಧಿಕಾರಿಗಳು, ಮಂತ್ರಿಗಳ ಪಾತ್ರ ಎನು? ಇದರಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News