ಸೆ.13ರಿಂದ ವಿಧಾನ ಮಂಡಲ ಅಧಿವೇಶನ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಚರ್ಚೆ ಸಾಧ್ಯತೆ
ಬೆಂಗಳೂರು, ಸೆ. 11: `ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್ ನಿರ್ವಹಣೆ, ಲಸಿಕೆ ಕೊರತೆ ಸಹಿತ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸೆ.13ರಿಂದ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಸರಕಾರವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜುಗೊಂಡಿದೆ.
ಈ ಮಧ್ಯೆಯೇ ಬೆಳಗಾವಿ ಮಹಾನಗರ ಪಾಲಿಕೆ ಸೇರಿದಂತೆ ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿರುವ ಉಮೇದಿನಲ್ಲಿರುವ ಆಡಳಿತ ಪಕ್ಷ ಬಿಜೆಪಿ ಹಾಗೂ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಸಿದ್ಧತೆ ನಡೆಸಿದ್ದು, ವಿಧಾನ ಮಂಡಲ ಅಧಿವೇಶನ ಕಲಾಪ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಗ್ವಾದ, ಕೋಲಾಹಲಕ್ಕೂ ಸಾಕ್ಷಿಯಾಗಲಿದೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಸರಕಾರ ಇದನ್ನು ನಿರ್ವಹಿಸಿದ ರೀತಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿವಾದಾತ್ಮಕ ಹೇಳಿಕೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಮರ್ಥನೆಗೆ ನಿಂತ ಬಿಜೆಪಿ ಮುಖಂಡರ ಹೇಳಿಕೆಗಳು ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ.
ಜೊತೆಗೆ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ನಡೆದ ಸಾಮಾಜಿಕ, ಆರ್ಥಿಕ ಸಮೀಕ್ಷೆ(ಜಾತಿ ಗಣತಿ) ವರದಿ ಸ್ವೀಕಾರದ ಸುತ್ತಲಿನ ಚರ್ಚೆ, ಕೋವಿಡ್ ಸಾವಿನ ಕುರಿತ ಸರಕಾರದ ಸುಳ್ಳು ಅಂಕಿ-ಅಂಶಗಳು ಸೇರಿದಂತೆ ಕೋವಿಡ್ ಸಂದರ್ಭದಲ್ಲಿ ವಿವಿಧ ಸಮುದಾಯಗಳಿಗೆ ಸರಕಾರ ಘೋಷಿಸಿದ್ದ ಪರಿಹಾರದ ವಿಚಾರವೂ ಚರ್ಚೆಗೆ ಬರುವ ನಿರೀಕ್ಷೆ ಇದೆ. ಅಲ್ಲದೆ, ಅತಿವೃಷ್ಟಿ ಸಂತ್ರಸ್ತರ ನಿರ್ಲಕ್ಷ್ಯ, ರಾಜ್ಯದ ಅಭಿವೃದ್ಧಿಯಲ್ಲಿ ಆಗಿರುವ ಹಿನ್ನೆಲ್ಲೆ ಹಾಗೂ ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಮುನ್ನಲೆಗೆ ಬರಲಿವೆ ಎಂದು ಹೇಳಲಾಗುತ್ತಿದೆ.
ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಭೇಟಿ ಬಗ್ಗೆ ಮಾತನಾಡಿದ್ದ ಬೊಮ್ಮಾಯಿ ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ ಎಂದು ಸ್ಪಷ್ಟಣೆಯನ್ನು ನೀಡಿದ್ದರು. ಆದರೆ, ಈ ಭೇಟಿ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರದ ಮೇಲೆ ಮೃದುಧೋರಣೆ ಹೊಂದಿದ್ದಾರೆಂಬ ಸಂಶಯ ಸೃಷ್ಟಿಸಿದೆ.
ಅಧಿವೇಶನದಲ್ಲಿ ಜೆಡಿಎಸ್ ನಡೆ ಏನು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಸೆ.13ರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಕೇಂದ್ರದ ಅನುದಾನ, ಜಿಎಸ್‍ಟಿ ಬಾಕಿ ವಿಚಾರಗಳ ಜೊತೆಗೆ ರಾಜ್ಯದ ಜ್ವಲಂತ ಸಮಸ್ಯೆಗಳು ಈ ಅಧಿವೇಶನದಲ್ಲಿ ಚರ್ಚಿಸುವ ಸಾಧ್ಯತೆಗಳಿವೆ. ಸೆ.13ರಿಂದ ಆರಂಭವಾಗಲಿರುವ ಅಧಿವೇಶನ ಒಟ್ಟು 10 ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕ ವಲಯದಲ್ಲಿ ಕುತೂಹಲ ಮತ್ತು ನಿರೀಕ್ಷೆಗಳನ್ನು ಸೃಷ್ಟಿಸಿದೆ.
ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ
`ಸೆ.13ರ ಬೆಳಗ್ಗೆ 6ಗಂಟೆಯಿಂದ ಮಧ್ಯರಾತ್ರಿ 12ಗಂಟೆಯ ವರೆಗೆ ವಿಧಾನ ಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ವೇಳೆ ಕಾನೂನು ಭಂಗವನ್ನುಂಟು ಮಾಡುವ ಉದ್ದೇಶದಿಂದ ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಮೆರವಣಿಗೆ ಮತ್ತು ಸಭೆ ನಡೆಸುವುದು, ಶಸ್ತ್ರ, ದೊಣ್ಣೆ, ಮಾರಕಾಸ್ತ್ರ ಒಯ್ಯುವುದು, ಸ್ಫೋಟಕ ವಸ್ತುಗಳನ್ನು ಸಿಡಿಸುವುದನ್ನು ನಿರ್ಬಂಧಿಸಿದ್ದು, ಯಾವುದೇ ವ್ಯಕ್ತಿಗಳ ಪ್ರತಿಕೃತಿ ಪ್ರದರ್ಶನ, ಪ್ರಚೋಧನಕಾರಿ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ'
-ಕಮಲ್ ಪಂತ್ ನಗರ ಪೊಲೀಸ್ ಆಯುಕ್ತ