×
Ad

ಕೋವಿಡ್ ಪರಿಹಾರ ವಿತರಣೆಯಿಂದ ತಪ್ಪಿಸಿಕೊಳ್ಳಲು ಸರಕಾರಗಳು ಸಾವಿನ ಸಂಖ್ಯೆ ಮರೆಮಾಚುತ್ತಿದೆ: ರಾಮಲಿಂಗಾರೆಡ್ಡಿ ಆರೋಪ

Update: 2021-09-11 19:42 IST

ಬೆಂಗಳೂರು, ಸೆ. 11: `ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಉದ್ದೇಶದಿಂದ ಕೋವಿಡ್ ಸಾವಿನ ವಿಚಾರದಲ್ಲಿ ಸುಳ್ಳು ಲೆಕ್ಕ ನೀಡುತ್ತಿದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಹಾಗೂ ಬಿಟಿಎಂ ಲೇಔಟ್ ಕ್ಷೇತ್ರದ ಹಾಲಿ ಶಾಸಕ ರಾಮಲಿಂಗಾರೆಡ್ಡಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯ ಬಿಜೆಪಿ ಸರಕಾರದ ಮಾಹಿತಿ ಪ್ರಕಾರ ಕೋವಿಡ್ ಸೋಂಕಿನಿಂದ ಸತ್ತಿರುವವರ ಸಂಖ್ಯೆ 37,318. ರಾಜ್ಯದಲ್ಲಿ ಜನನ ಹಾಗೂ ಮರಣ ಇಲಾಖೆಯ ಅಧಿಕೃತ ಅಂಕಿಅಂಶ ಹಾಗೂ ವರ್ಷವಾರು ಮೃತರ ಗಣತಿ ಪ್ರಕಾರ, 2018ರಲ್ಲಿ ಸತ್ತವರ ಸಂಖ್ಯೆ 4,83,511, 2019ರಲ್ಲಿ 5,08,584, 2020ರಲ್ಲಿ 5,51,808 ಜನ ಸತ್ತಿದ್ದಾರೆ. ಪ್ರತಿವರ್ಷ ಸತ್ತವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2021ರ ಆರಂಭಿಕ ಏಳು ತಿಂಗಳು ಅಂದರೆ ಜುಲೈ ತಿಂಗಳ ವರೆಗೂ 4.21 ಲಕ್ಷ ಜನ ಸತ್ತಿದ್ದಾರೆ' ಎಂದು ವಿವರಿಸಿದರು.

`ಇನ್ನು ಪ್ರತಿವರ್ಷ ಆರಂಭಿಕ ಏಳು ತಿಂಗಳ ಸಾವಿನ ಸಂಖ್ಯೆ ನೋಡುವುದಾದರೆ, 2018ರಲ್ಲಿ 2.69 ಲಕ್ಷ ಜನ ಮೃತಪಟ್ಟರೆ, 2019ರಲ್ಲಿ 2,79 ಲಕ್ಷ ಜನ ಸತ್ತಿದ್ದಾರೆ, 2020ರಲ್ಲಿ 2.64 ಲಕ್ಷ ಜನ ಸತ್ತಿದ್ದರು. 2021ರಲ್ಲಿ 4,26,790 ಜನ ಸತ್ತಿದ್ದಾರೆ. ಅಂದರೆ 1.62 ಲಕ್ಷ ಜನ ಹೆಚ್ಚುವರಿಯಾಗಿ ಸತ್ತಿದ್ದಾರೆ. ಇದೀಗ ಈ 1.62 ಲಕ್ಷ ಜನ ಹೇಗೆ ಸತ್ತಿದ್ದಾರೆ? ರಾಜ್ಯದಲ್ಲಿ ಸುನಾಮಿ, ಭೂಕಂಪ, ಚಂಡಮಾರುತ ಬಂದಿತ್ತೇ? ಕಾಲರ, ಪ್ಲೇಗ್‍ನಂತಹ ಬೇರೆ ಕಾಯಿಲೆಗಳು ಬಂದಿತ್ತೇ?' ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

`ಕಳೆದ ವರ್ಷವೇ ಕೋವಿಡ್ ಸೋಂಕಿನಿಂದ 30 ಸಾವಿರ ಜನ ಸತ್ತಾಗ ಕೇವಲ 3 ಸಾವಿರ ಜನ ಎಂದು ಲೆಕ್ಕ ತೋರಿಸಿದ್ದರು. ಸರಕಾರ ಕೋವಿಡ್ ಸಾವಿನ ವಿಚಾರದಲ್ಲಿ ಸುಳ್ಳು ಲೆಕ್ಕ ನೀಡುತ್ತಿದೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಸರಕಾರ ಹೇಗೆ ಈ ಸುಳ್ಳು ಲೆಕ್ಕ ನೀಡುತ್ತಿದೆ ಎಂಬುದು ತಿಳಿಯಬೇಕಾದರೆ, ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ, ಕೋವಿಡ್ ಸೋಂಕಿತರಾಗಿ ಚಿಕಿತ್ಸೆ ಪಡೆದವರು, ಟಿಬಿ, ಕ್ಯಾನ್ಸರ್, ಹೃದಯ ಸಂಬಂಧಿ, ಬಿಪಿ, ಆರ್ಥರೈಟಿಸ್, ಪಾಶ್ರ್ವವಾಯು ಸೇರಿದಂತೆ ಇತರೆ ಅನಾರೋಗ್ಯವಿರುವವರು ಸತ್ತರೆ ಕೋವಿಡ್ ಸಾವು ಎಂದು ಮರಣಪತ್ರ ನೀಡುವುದಿಲ್ಲ' ಎಂದು ಅವರು ದೂರಿದರು.

`ಸೋಂಕಿತರು ನಂತರ ನೆಗೆಟಿವ್ ಬಂದರೆ ಅವರನ್ನು ಕೋವಿಡ್ ಎಂದು ಪರಿಗಣಿಸುವುದಿಲ್ಲ. ಹೀಗೆ ಸರಕಾರಗಳು ತಪ್ಪು ಸಾವಿನ ಲೆಕ್ಕ ನೀಡುತ್ತಿದೆ. ಈ ಯಾವುದೇ ಕಾಯಿಲೆ ಇಲ್ಲದವರು ಕೋವಿಡ್‍ನಿಂದ ಸತ್ತಿದ್ದರೆ ಅದನ್ನು ಮಾತ್ರ ಕೋವಿಡ್ ಸಾವು ಎಂದು ಪರಿಗಣಿಸಿದ್ದಾರೆ. ಆ ರೀತಿ ಸತ್ತಿರುವವರು 37 ಸಾವಿರ ಜನ ಇದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 42.80 ಲಕ್ಷ ಜನ ಭಾರತದಲ್ಲಿ ಕೋವಿಡ್‍ನಿಂದ ಸತ್ತಿದ್ದಾರೆ ಎಂದು ವರದಿ ನೀಡಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

`ಮೃತರಿಗೆ 5 ಲಕ್ಷ ರೂ.ಪರಿಹಾರ ನೀಡಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ. ಆದರೆ, ಸರಕಾರ ಕೇವಲ 1 ಲಕ್ಷ ರೂ.ಪರಿಹಾರ ಘೋಷಿಸಿದ್ದು, ಅದರಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಪರಿಹಾರ ಇಲ್ಲ, ಕುಟುಂಬದಲ್ಲಿ ಒಬ್ಬರಿಗೆ, ಬಿಪಿಎಲ್ ಕಾರ್ಡ್‍ದಾರರಿಗೆ ಮಾತ್ರ ಪರಿಹಾರ ಎಂಬ ಷರತ್ತುಗಳನ್ನು ಹಾಕಿದ್ದಾರೆ. ದೇಶದಲ್ಲಿ 41 ಲಕ್ಷ ಜನ ಸತ್ತಿರುವುದನ್ನು ಮುಚ್ಚಿಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಯತ್ನಿಸುತ್ತಿವೆ' ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

`ಕೋವಿಡ್ ಮೃತರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಉದ್ದೇಶದಿಂದ ಕೇಂದ್ರ ಸರಕಾರ ತಾಂತ್ರಿಕವಾಗಿ ಮಾರ್ಗಸೂಚಿ ಹೊರಡಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಈ ಅಂಕಿ-ಅಂಶಗಳು ಕೇವಲ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟವರ ಸಂಖ್ಯೆಯಾದರೆ, ಆಸ್ಪತ್ರೆಗೆ ದಾಖಲಾಗದೇ ಮನೆಯಲ್ಲಿ ಮೃತಪಟ್ಟವರ ಸಂಖ್ಯೆ ಬೇರೆಯಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಸರಕಾರದ ವೈಫಲ್ಯ ಮುಚ್ಚಿಹಾಕಲು ಬಿಜೆಪಿ ಸರಕಾರಗಳು ಸುಳ್ಳು ಸಾವಿನ ಲೆಕ್ಕ ನೀಡಿವೆ. ಅಧಿವೇಶನದಲ್ಲಿ ಕೋವಿಡ್ ವಿಚಾರ ಬಂದಾಗ ಈ ಎಲ್ಲ ವಿಚಾರವೂ ಪ್ರಸ್ತಾಪವಾಗಲಿದೆ'

-ರಾಮಲಿಂಗಾರೆಡ್ಡಿ ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News