ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ನನಗೆ ಹಣದ ಆಮಿಷವೊಡ್ಡಿದ್ದು ನಿಜ: ಶಾಸಕ ಶ್ರೀಮಂತ ಪಾಟೀಲ್
ಬೆಳಗಾವಿ, ಸೆ. 11: `ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಲು ನನಗೆ ಹಣದ ಆಮಿಷವೊಡ್ಡಿದ್ದು ನಿಜ. ಆದರೆ, ನಾನು ಹಣವನ್ನು ತಿರಸ್ಕರಿಸಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಬೇಡಿಕೆ ಇಟ್ಟಿದ್ದೆ' ಎಂದು ಮಾಜಿ ಸಚಿವ ಹಾಗೂ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, `ನನಗೆ ಹಣದ ಆಫರ್ ನೀಡಿದ್ದರೂ ನಾನು ಬೇಡ ಎಂದಿದ್ದೆ. ಯಾವುದೇ ಹಣ ನನಗೆ ಬೇಡ. ನನಗೆ ಸೂಕ್ತ ಸ್ಥಾನ ನೀಡಬೇಕು ಕೋರಿದ್ದೆ. ಹಣದ ಬದಲು ಕ್ಷೇತ್ರದ ಜನರಿಗೆ ಒಳ್ಳೆಯ ಸೇವೆ ಮಾಡುವ ನಿಟ್ಟಿನಲ್ಲಿ ಯೋಗ್ಯ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದೆ' ಎಂದು ಸ್ಪಷ್ಟಣೆ ನೀಡಿದರು.
`ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಈಗಾಗಲೇ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡಿದ್ದೇನೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಖಂಡಿತವಾಗಿಯೂ ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ' ಎಂದು ಶ್ರೀಮಂತ ಪಾಟೀಲ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.