ಗಣೇಶೋತ್ಸವ ಆಚರಣೆ ವೇಳೆ ಪೋಲಿಸರ ಕರ್ತವ್ಯಕ್ಕೆ ಅಡ್ಡಿ: ಸಂಘಪರಿವಾರದ 14 ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

Update: 2021-09-11 17:05 GMT

ಸಕಲೇಶಪುರ, ಸೆ.11: ಗಣೇಶೋತ್ಸವ ಆಚರಿಸುವ ಸಂಬಂಧ ಸರಕಾರದ ಪರಿಷ್ಕೃತ ಮಾರ್ಗಸೂಚಿ ವಿರುದ್ಧವಾಗಿ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ನಡೆಸಿದ್ದಲ್ಲದೇ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 14 ಮಂದಿ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಸುಮೋಟೊ ಕೇಸ್ ದಾಖಲುಮಾಡಲಾಗಿದೆ.

ಗಣಪತಿ ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಸಬ್‌ಇನ್‌ಸ್ಪೆಕ್ಟರ್ ಬಸವರಾಜ್ ಚಿಂಚೋಳ್ಳಿ ಮನವಿಗೂ ಸ್ಪಂದಿಸದೆ ಕರ್ತವ್ಯಕ್ಕೆ ಅಡ್ಡಿಪಡಿಸುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಸಂಘಪರಿವಾರದ ಕಾರ್ಯಕರ್ತರಾದ ರಘು ರಾಘವೇಂದ್ರ, ಶ್ರೀಜೀತ್ ಗೌಡ, ಕಾರ್ತಿಕ್, ಕುಶಾಲನಗರ ಬಡಾವಣೆಯ ರಘು, ನಾಗರಾಜ, ಶ್ರೀಕಾಂತ್, ಸದಾನಂದ, ಸದಾ ಹುಲ್ಲಹಳ್ಳಿ ಗ್ರಾಮದ ದೀಪಕ್, ಗುರುಮೂರ್ತಿ ಗುರು, ಪ್ರದೀಪ, ಕೌಡಳ್ಳಿ ಗ್ರಾಮದ ರವಿ ಪೂಜಾರಿ ರವಿ, ಧರ್ಮೇಶ, ಶಿವ ಜಿಪ್ಪಿ ಶಿವ, ಸುಭಾಷ್, ಅಜಾದ್ ರಸ್ತೆಯ ಅಮೃತ್ ಹಾಗೂ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸೆ.10ರಂದು ಸಂಜೆ 5:15 ಗಂಟೆ ಸಮಯದಲ್ಲಿ ಪಿಎಸ್ಸೈ ಬಸವರಾಜ್ ಚಿಂಚೋಳಿ ಅವರು, ಸಕಲೇಶಪುರ ನಗರದ ಎಸ್.ಎಸ್. ವೃತ್ತದಲ್ಲ್ಲಿ ಠಾಣಾ ಸಿಬ್ಬಂದಿ ಶ್ರೀಕಂಠಸ್ವಾಮಿ, ಮಲ್ಲಿಕಾರ್ಜನ, ನಂದೀಶ್ ಅವರೊಂದಿಗೆ ಇಲಾಖಾ ಜೀಪಿನಲ್ಲಿ ಗಸ್ತಿನಲ್ಲಿದ್ದಾಗ ಸಕಲೇಶಪುರ ಟೌನ್ ಎಸ್.ಪಿ.ರಸ್ತೆಯ ರಾಮಧೂತ ಕಚೇರಿಯಲ್ಲಿ ಯಾವುದೇ ಅನುಮತಿಯನ್ನು ಪಡೆಯದೇ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ವಿಸರ್ಜನೆ ವೇಳೆ ಸರಕಾರದ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಡೋಲು ತಮಟೆಗಳನ್ನು ಬಾರಿಸುತ್ತಾ, ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘನೆ ಮಾಡಿದ್ದರಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News