ಮಹಾನಗರ ಪಾಲಿಕೆ ಪಟ್ಟ: ಜೆಡಿಎಸ್ ಜೊತೆ ಮೈತ್ರಿಗೆ `ಬಿಜೆಪಿ ಕಸರತ್ತು'

Update: 2021-09-11 15:56 GMT

ಬೆಂಗಳೂರು, ಸೆ. 11: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತವಿದ್ದರೂ ಮೇಯರ್ ಆಯ್ಕೆ ಗೊಂದಲ ಸೃಷ್ಟಿಯಾಗಿದೆ. ಈ ಮಧ್ಯೆ ಅತಂತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲು ಆಡಳಿತಾರೂಢ ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿಗೆ ತೆರೆಮರೆಯಲ್ಲೆ ತೀವ್ರ ಕಸರತ್ತು ನಡೆಸಿದೆ.

ಬೆಳಗಾವಿ ಪಾಲಿಕೆಯ ಒಟ್ಟು 58 ವಾರ್ಡ್‍ಗಳ ಪೈಕಿ 35ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಸಾಮಾನ್ಯ ವರ್ಗಕ್ಕೆ ಮೇಯರ್, ಸಾಮಾನ್ಯ ವರ್ಗದ ಮಹಿಳೆಗೆ ಉಪಮೇಯರ್ ಸ್ಥಾನ ಮೀಸಲಿಡಲಾಗಿದೆ. ಲಿಂಗಾಯತ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಬೇಕೆಂದು ಆ ಸಮುದಾಯದ ಸ್ವಾಮೀಜಿಗಳು ರಂಗಕ್ಕಿಳಿದಿದ್ದು, ಇದು ಬಿಜೆಪಿಗೆ ತೀವ್ರ ತಲೆನೋವಾಗಿ ಪರಿಗಣಿಸಿದೆ. ಪಾಲಿಕೆಯ ನೂತನ ಸದಸ್ಯರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಲಿದ್ದಾರೆ.

ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ.ಕಾರಜೋಳ ಹಾಗೂ ಶಾಸಕ ಅಭಯ್ ಪಾಟೀಲ್ ಗೌಪ್ಯ ಸ್ಥಳದಲ್ಲೆ ಮೇಯರ್ ಮತ್ತು ಉಪಮೇಯರ್ ಆಯ್ಕೆ ಸಂಬಂಧ ಸಮಾಲೋಚನೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಚುನಾವಣೆಗೆ ಮೊದಲು ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅನ್ಯಾಯ ಮಾಡಲಾಗಿದೆ. ಅದನ್ನು ಸರಿಪಡಿಸಲು ಲಿಂಗಾಯತ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಬೇಕೆಂದು ವೀರಶೈವ ಮಹಾಸಭಾ ಪಟ್ಟು ಹಿಡಿರುವುದು ಬಿಜೆಪಿ ಬಿಸಿ ತುಪ್ಪವಾಗಿದೆ.

ಅತ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಒಟ್ಟು 82 ವಾರ್ಡ್‍ಗಳ ಪೈಕಿ ಬಿಜೆಪಿ 39 ಸ್ಥಾನಗಳನ್ನು ಗಳಿಸಿದ್ದು, ಇನ್ನೂ ಮೂರು ಸ್ಥಾನಗಳ ಅಗತ್ಯವಿದೆ. ಈ ನಡುವೆಯೇ ಮೇಯರ್ ಸ್ಥಾನಕ್ಕೆ ಪ್ರವರ್ಗ 2-ಎ ಗೆ ಮೀಸಲಾಗಿದ್ದು, ಉಪಮೇಯರ್ ಸ್ಥಾನ ಎಸ್ಸಿ ಮಹಿಳೆಗೆ ನಿಗದಿಪಡಿಸಲಾಗಿದೆ. ತಮ್ಮ ಬೆಂಬಲಿಗರಿಗೆ ಮೇಯರ್ ಮತ್ತು ಉಪಮೇಯರ್ ಸ್ಥಾನ ಕೊಡಿಸಬೇಕು ಎಂದು ಜೋಶಿ, ಶೆಟ್ಟರ್ ಹಾಗೂ ಬೆಲ್ಲದ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಇದೇ ವಿಚಾರ ತೀವ್ರ ಗೊಂದಲಕ್ಕೂ ಕಾರಣವಾಗಿದೆ.

ಇನ್ನೂ ಕಲಬುರಗಿ ಮಹಾನಗರ ಪಾಲಿಕೆಯ ಒಟ್ಟು 55 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗಳಿಸುವ ಮೂಲಕ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಪಾಲಿಕೆಯಲ್ಲಿ 4 ಸ್ಥಾನ ಗಳಿಸಿರುವ ಜೆಡಿಎಸ್ ಪಕ್ಷದ ಬೆಂಬಲ ಕೋರಿದೆ. ಈ ನಡುವೆಯೇ ಕೇವಲ 23 ಸ್ಥಾನಗಳಿಸಿರುವ ಬಿಜೆಪಿ ಪಾಲಿಕೆಯ ಆಡಳಿತ ಪಟ್ಟಕ್ಕೇರಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಚಿವ ಆರ್.ಅಶೋಕ್ ಮಾತುಕತೆ ನಡೆಸಿದ್ದಾರೆ. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಹಿನ್ನೆಲೆಯಲ್ಲಿ ಸಚಿವ ಆರ್.ಅಶೋಕ್, ಬಿಡದಿಯ ಪಾರ್ಮ್‍ಹೌಸ್‍ನಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News